Friday, November 20, 2026
spot_imgspot_img
spot_imgspot_img

ಮಂಗಳೂರು: 8.80 ಲಕ್ಷ ರೂ. ಮೌಲ್ಯದ 88 ಗ್ರಾಂ MDMA ವಶ: ಮೂವರು ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು: ಮಾದಕ ವಸ್ತು MDMA ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಯುವಕರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಅವರಿಂದ 8.80 ಲಕ್ಷ ರೂ. ಮೌಲ್ಯದ 88 ಗ್ರಾಂ MDMA ಸೇರಿದಂತೆ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು ಉಡುಪಿ ಜಿಲ್ಲೆಯ ಬುಂದರ್ ಕುಂಜತ್ತ್ ಬೆಟ್ಟು ನಿವಾಸಿ ರಾಶೀದ್ ಖಾನ್ (32), ಮಂಗಳೂರು ತಾಲೂಕಿನ ವಾಮಂಜೂರು ತಿರುವೈಲ್ ಗ್ರಾಮದ ಮೊಹಮ್ಮದ್ ಅನ್ವರ್ (43) ಹಾಗೂ ಸುರತ್ಕಲ್ ಸೂರಿಂಜೆ ನಿವಾಸಿ ಅಬ್ದುಲ್ ಮಜೀದ್ (40) ಎಂದು ಗುರುತಿಸಲಾಗಿದೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಾ ನಾಯ್ಕ್ ವೈ. ಅವರು ಸಿಬ್ಬಂದಿಯೊಂದಿಗೆ ಪಚ್ಚನಾಡಿ ಗ್ರಾಮದ ಡಂಪಿಂಗ್ ಯಾರ್ಡ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, KA 19 MK 3297 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ವೆನ್ಯೂ ಕಾರಿನಲ್ಲಿ ಮೂವರು MDMA ಮಾದಕ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.ಈ ಮಾಹಿತಿಯಂತೆ ಸಂಜೆ ಸುಮಾರು 5.30ರ ವೇಳೆಗೆ ಬೋಂದೇಲ್ ಕಡೆಯಿಂದ ವಾಮಂಜೂರು ಕಡೆಗೆ ಬರುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳನ್ನು ವಿಚಾರಿಸಿದಾಗ, ತಮ್ಮ ಪ್ಯಾಂಟ್ ಕಿಸೆಯಲ್ಲಿ MDMA ಮಾದಕ ವಸ್ತು ಇರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.ಪರಿಶೀಲನೆ ವೇಳೆ ಆರೋಪಿಗಳಿಂದ ಒಟ್ಟು 88 ಗ್ರಾಂ MDMA ಮಾದಕ ವಸ್ತು (ಅಂದಾಜು ಮೌಲ್ಯ 8,80,000 ರೂ.), ನಾಲ್ಕು ಮೊಬೈಲ್ ಫೋನ್‌ಗಳು, 18,440 ರೂ. ನಗದು, 13 ಪಾರದರ್ಶಕ ಜಿಪ್‌ಲಾಕ್ ಕವರ್‌ಗಳು ಹಾಗೂ ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ, ಮಾದಕ ವಸ್ತು ಸಾಗಾಟಕ್ಕೆ ಬಳಸಲಾಗಿದ್ದ ಅಂದಾಜು 5 ಲಕ್ಷ ರೂ. ಮೌಲ್ಯದ ವೆನ್ಯೂ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮಾದಕ ವಸ್ತು ಸಾಗಾಟದ ಜಾಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!