


ಮೈಸೂರು: ಕಾಡಿನ ರಸ್ತೆಯಲ್ಲಿ ಶಾಂತವಾಗಿ ಸಾಗುತ್ತಿದ್ದ ಕಾಡಾನೆಯ ಮೇಲೆ ಕಲ್ಲು ಎಸೆದು ವಿಕೃತಿ ಮೆರೆದಿದ್ದ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಅನ್ನು ವಶಕ್ಕೆ ಪಡೆದಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ. ಕುಪ್ಪೆ ವಲಯದ ವ್ಯಾಪ್ತಿಗೆ ಬರುವ ಮೈಸೂರು–ವಯನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿತ್ತು. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಯುವಕರು, ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಒಂಟಿ ಸಲಗವನ್ನು ಕೆಣಕಿ ಕಲ್ಲು ಎಸೆದಿದ್ದರು. ಯುವಕರ ಈ ಬೇಜವಾಬ್ದಾರಿ ಮತ್ತು ವಿಕೃತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಕಿಡಿಗೇಡಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು
ಸಚಿವರ ಆದೇಶದ ಬೆನ್ನಲ್ಲೇ ಚುರುಕಿನ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳ ತಂಡ, ವಿಡಿಯೋ ಆಧರಿಸಿ ಆರೋಪಿಗಳ ಜಾಡು ಹಿಡಿದಿದೆ. ಕೃತ್ಯ ಎಸಗಿದವರು ಆನೆಮಾಳ ಹಾಡಿಯ ಯುವಕರು ಎಂಬುದನ್ನು ಪತ್ತೆಹಚ್ಚಿರುವ ಅಧಿಕಾರಿಗಳು, ಇಬ್ಬರ ವಿರುದ್ಧವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಅನ್ನು ಜಪ್ತಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.








