Saturday, November 21, 2026
spot_imgspot_img
spot_imgspot_img

ಹವಾಲಾ ಕೇಸ್‌ನಲ್ಲಿ ED ಎಡವಟ್ಟು: ಆರೋಪಿ ಮನೆ ಎಂದು ತಪ್ಪಾಗಿ ಬೇರೊಂದು ಮನೆಗೆ ನುಗ್ಗಿ 4 ಗಂಟೆಗಳ ಶೋಧ

- Advertisement -
- Advertisement -

ಕೋಝಿಕ್ಕೋಡ್: ಹವಾಲಾ ಕೇಸ್‌ಗೆ ಸಂಬಂಧಿಸಿದ ಆರೋಪಿ ಮನೆ ಎಂದು ತಿಳಿದು ಬೇರೊಂದು ಮನೆಗೆ ED ಅಧಿಕಾರಿಗಳು ದಾಳಿ ನಡೆಸಿ, 4 ಗಂಟೆಗಳ ಕಾಲ ಶೋಧ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ.

100 ಕೋಟಿ ರೂ.ಗಳ ಶಂಕಿತ ಹವಾಲಾ ವಹಿವಾಟಿಗೆ ಸಂಬಂಧಿಸಿದ ಆರೋಪಿಯನ್ನು ಹುಡುಕುತ್ತಿದ್ದ ED ಅಧಿಕಾರಿಗಳು, ನೌಶಾದ್ ಎಂಬವರ ಮನೆಯನ್ನು ಆರೋಪಿಯ ಮನೆ ಎಂದು ತಪ್ಪಾಗಿ ಭಾವಿಸಿ ಶೋಧ ನಡೆಸಿದ್ದಾರೆ.

ಶುಕ್ರವಾರ (ನ.20) ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಧಿಕಾರಿಗಳು ನೌಶಾದ್ ಅವರ ಮನೆಗೆ ಆಗಮಿಸಿ, 100 ಕೋಟಿ ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನೌಶಾದ್ ಎಂಬ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಈ ವೇಳೆ ಅಧಿಕಾರಿಗಳು ಆರೋಪಿಯ ತಂದೆಯ ಹೆಸರು ಉಸ್ಮಾನ್ ಎಂದಾಗ, ನಮ್ಮ ಮನೆಯ ನೌಶಾದ್ ಅವರ ತಂದೆಯ ಹೆಸರು ಉಸ್ಮಾನ್ ಅಲ್ಲ, ಮೊಹಮ್ಮದ್ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. ನೀವು ತಪ್ಪು ವಿಳಾಸಕ್ಕೆ ಬಂದಿದ್ದೀರಿ ಎಂದು ಹೇಳಿದರೂ ಅಧಿಕಾರಿಗಳು ಮಾತು ಕೇಳದೆ ಶೋಧ ಮುಂದುವರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸುಮಾರು 4 ಗಂಟೆಗಳ ಕಾಲ ಮನೆಯನ್ನು ಸಂಪೂರ್ಣ ಶೋಧಿಸಿದರೂ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ಕಾರ್ಯಾಚರಣೆಯ ಕೊನೆಯಲ್ಲಿ ಅಧಿಕಾರಿಗಳು ನಿಜವಾದ ಶಂಕಿತನ ಫೋಟೋ ತೋರಿಸಿದಾಗ, ಆ ವ್ಯಕ್ತಿ ತಮ್ಮ ಮನೆಯ ನೌಶಾದ್ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಮನೆಯ ನೌಶಾದ್ ಅವರು ಶಾರ್ಜಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ತೊರೆದು 9 ತಿಂಗಳ ಹಿಂದೆ ಕೇರಳಕ್ಕೆ ಮರಳಿದ್ದರು. ಪ್ರಸ್ತುತ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಶೋಧ ನಡೆಸುವ ಮೊದಲು ವಿಳಾಸ ಮತ್ತು ಗುರುತಿನ ವಿವರಗಳನ್ನು ಪರಿಶೀಲಿಸಬೇಕಾಗಿತ್ತು ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕುಟುಂಬದ ಆರೋಪಕ್ಕೆ ED ಅಧಿಕಾರಿಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ವಿದೇಶಿ ವಿನಿಮಯ ಉಲ್ಲಂಘನೆ ಮತ್ತು ಹವಾಲಾ ವಹಿವಾಟುಗಳ ತನಿಖೆಯ ಭಾಗವಾಗಿ ರಾಜ್ಯಾದ್ಯಂತ ಸುಮಾರು 12 ಸ್ಥಳಗಳಲ್ಲಿ ನಡೆಸಿದ ಶೋಧಗಳಲ್ಲಿ ಈ ಶೋಧವೂ ಸೇರಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಈ ಶೋಧ ನಡೆಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!