Thursday, November 26, 2026
spot_imgspot_img
spot_imgspot_img

ನಿರ್ಲಕ್ಷ್ಯದ ಚಾಲನೆಗೆ ಶಿಕ್ಷೆ: ಕಾರು ಚಾಲಕನಿಗೆ 6 ತಿಂಗಳ ಜೈಲು, ₹7,500 ದಂಡ

- Advertisement -
- Advertisement -

ಮೂಡುಬಿದಿರೆ: ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯೊಬ್ಬರ ಸಾವಿಗೆ ಹಾಗೂ ಮತ್ತೊಬ್ಬರು ಗಂಭಿಯಗಾಯಗೊಳ್ಳಲು ಕಾರಣನಾದ ಕಾರು ಚಾಲಕನಿಗೆ ಮೂಡುಬಿದಿರೆಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯವು 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 7,500 ರೂ.ದಂಡ ವಿಧಿಸಿ ತೀರ್ಪು ನೀಡಿದೆ.

ತೌಸಿಫ್ ಅಹ್ಮದ್ ಶಿಕ್ಷೆಗೊಳಗಾದ ಅರೋಪಿ ಎಂದು ತಿಳಿದುಬಂದಿದೆ.

2022ರ ಜನವರಿ 20ರಂದು ಬೆಳಿಗ್ಗೆ ಸುಮಾರು 6.30ರ ವೇಳೆಗೆ ಈ ಅಪಘಾತ ಸಂಭವಿಸಿತ್ತು. ವಾಮನ ದೇವಾಡಿಗ ಎಂಬವರು ತಮ್ಮ ಬೈಕ್‌ನಲ್ಲಿ ಕಲ್ಲಬೆಟ್ಟು ಎಂ.ಕೆ. ಶೆಟ್ಟಿ ಶಾಲೆಗೆ ಹೋಗುವ ಕ್ರಾಸ್ ರಸ್ತೆಯ ಬಳಿ, ಉಡುಪಿ ಕಡೆಯಿಂದ ಮೂಡುಬಿದಿರೆ ಮಾರ್ಗವಾಗಿ ವೇಣೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ವೇಣೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬಂದ ಆರೋಪಿ ತೌಸಿಫ್ ಅಹ್ಮದ್, ರಸ್ತೆಯ ಬಲಬದಿಗೆ ಬಂದು ವಾಮನ ದೇವಾಡಿಗರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡ ವಾಮನ ದೇವಾಡಿಗ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಅಲ್ಲದೆ, ಕಾರಿನಲ್ಲಿದ್ದ ಸಾಕ್ಷಿ ಕಲಂದರ್ ಎಂಬವರ ತಲೆಯ ಎಡಬದಿ ಹಾಗೂ ಎಡ ಕೈಗೆ ಗಂಭೀರ ಗಾಯಗಳಾಗಿದ್ದವು.

ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅಂದಿನ ಪೊಲೀಸ್ ನಿರೀಕ್ಷಕರಾದ ನಿರಂಜನ್ ಕುಮಾ‌ರ್ ಕೆ.ಇ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6ತಿಂಗಳ ಸಾದಾ ಜೈಲು ಹಾಗೂ 7,500ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಎಸ್. ಅವರು ವಾದ ಮಂಡಿಸಿದ್ದರು.

- Advertisement -

Related news

error: Content is protected !!