ಬೆಂಗಳೂರು: ಕಾಂಗ್ರೆಸ್ ನಾಯಕರ ವೈಯಕ್ತಿಕ ಒಳಜಗಳಕ್ಕೆ ಸಾಕ್ಷಿಯಾಗಿದ್ದ ಡಿ.ಜೆ.ಹಳ್ಳಿ –ಕೆಜಿಹಳ್ಳಿ ಗಲಾಟೆ ಪ್ರಕರಣ ಚಾರ್ಜ್ ಶೀಟ್ ಸಲ್ಲಿಕೆ ಹಂತಕ್ಕೆ ತಲುಪಿದ್ದು ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಗೆ ಕೊನೆಗೂ ಜಾಮೀನು ಸಿಕ್ಕಿದೆ. ಆದರೆ ಸಂಪತ್ ರಾಜ್ ಜಾಮೀನು ಅಖಂಡ ಶ್ರೀನಿವಾಸ್ ಮೂರ್ತಿ ರನ್ನು ಕೆರಳಿಸಿದ್ದು, ಪಕ್ಷದ ವರಿಷ್ಠರ ವಿರುದ್ಧ ಸೋನಿಯಾಗಾಂಧಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಡಿಜೆಹಳ್ಳಿ-ಕೆಜಿಹಳ್ಳಿ ಗಲಾಟೆಯ ಪ್ರಮುಖ ಆರೋಪಿಯಾಗಿದ್ದ ಸಂಪತ್ ರಾಜ್ ನನ್ನು ನವೆಂಬರ್ 16 ರಂದು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಸಂಪತ್ ರಾಜ್ ಜಾಮೀನಿಗಾಗಿ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಫೆ.12 ರಂದು ಜಾಮೀನು ಮಂಜೂರು ಮಾಡಿತ್ತು.

ಸಂಪತ್ ರಾಜ್ ಜಾಮೀನು ಸಿಕ್ಕಿರುವುದಕ್ಕೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಧಾನ ವ್ಯಕ್ತಪಡಿಸಿದ್ದು, ಸಂಪತ್ ರಾಜ್ ಎಂಥವರು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಮನೆಯನ್ನೇ ಸುಟ್ಟು ಹಾಕಿದ್ದಾರೆ. ನಾನು ಈಗ ಬೀದಿಯಲ್ಲಿ ಬದುಕುತ್ತಿದ್ದೇನೆ. ಇನ್ನು ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ರೇ ಏನು ಮಾಡಬಹುದು? ಕಾಂಗ್ರೆಸ್ ನಾಯಕರು ಇದಕ್ಕೆ ಸ್ಪಂದಿಸುತ್ತಿಲ್ಲ.

ನಾನು ಹಲವಾರು ಭಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಆದರೆ ಡಿಕೆಶಿ ಯಾಕೆ ಸಂಪತ್ ರಾಜ್ ರನ್ನು ಬೆಂಬಲಿಸುತ್ತಾರೆ ಎಂಬುದು ಗೊತ್ತಿಲ್ಲ. ಸಿದ್ಧರಾಮಯ್ಯನವರು ಮಾತ್ರ ನನಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ನನಗಾದ ಅನ್ಯಾಯದ ಬಗ್ಗೆ ನಾನು ಸೋನಿಯಾಗಾಂಧಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಆಕ್ರೋಶ ತೋಡಿಕೊಂಡಿದ್ದಾರೆ.

ಈ ಮಧ್ಯೆ ಕೊನೆ ಕ್ಷಣದಲ್ಲಿ ಕೈನಾಯಕರ ಜಗಳಕ್ಕೆ ಎಂಟ್ರಿಯಾಗಿರುವ ಮಾಜಿಸಿಎಂ ಸಿದ್ಧರಾಮಯ್ಯ ಸಂಪತ್ ರಾಜ್ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ಇನ್ನು ಜೈಲಿನಿಂದ ಹೊರಬರುತ್ತಿದ್ದಂತೆ ಮತ್ತೆ ತಮ್ಮ ವರಸೆ ತೋರಿರುವ ಸಂಪತ್ ರಾಜ್ ನಾನು ಯಾರು ಎಂಬುದು ಮುಂದಿನ ದಿನದಲ್ಲಿ ಗೊತ್ತಾಗುತ್ತೆ ಎಂದಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕೈನಾಯಕರ ಜಗಳ ಬೀದಿಗೆ ಬಿದ್ದಿದ್ದು ಕಾಂಗ್ರೆಸ್ ನಲ್ಲಿ ದಲಿತ ಶಾಸಕನ ಸಂಕಷ್ಟಕ್ಕೆ ಬೆಲೆ ಬಂದಿಲ್ಲ. ಕೇವಲ ಒಂದು ಟಿಕೆಟ್ ಗಾಗಿ ಶಾಸಕರ ನಿವಾಸವನ್ನೇ ಸುಟ್ಟು ಹಾಕಿದ್ದರೂ ಕೈ ನಾಯಕರು ಕಂಡು ಕಾಣದಂತೆ ನಿಂತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.









