Tuesday, September 15, 2026
spot_imgspot_img
spot_imgspot_img

ಕುಂದಾಪುರ: ಸೀಮಂತ ಕಾರ್ಯಕ್ರಮಕ್ಕೆ ಬಂದ ಪತ್ನಿಯನ್ನು ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

- Advertisement -
- Advertisement -

ಕುಂದಾಪುರ: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಕುಂದ ಶಾಲೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ.

ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ, ಕೋಗಾರ್ ನಿವಾಸಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೂಲತಃ ಸೊರಬ ನಿವಾಸಿ ಆಗಿರುವ ಪೂರ್ಣಿಮಾ ಆಚಾರ್ಯ ಅವರು ಕಳೆದ ಹದಿನಾರು ವರ್ಷಗಳ ಹಿಂದೆ ಕೋಗಾ‌ರ್‌ ಮೂಲದ ರವಿ ಆಚಾರ್ಯ ಅವರೊಂದಿಗೆ ವಿವಾಹವಾಗಿದ್ದರು. ರವಿ ಹೆಮ್ಮಾಡಿ ಸಮೀಪದ ಬಗ್ವಾಡಿಯಲ್ಲಿ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದು, ಪತಿ ಹಾಗೂ ಪತ್ನಿ ತಮ್ಮ ಎರಡು ಮಕ್ಕಳೊಂದಿಗೆ ಮೊದಲು ಹೆಮ್ಮಾಡಿಯಲ್ಲೇ ನೆಲೆಸಿದ್ದರು. ಅತೀಯಾದ ಕುಡಿತದ ಚಟ ಹೊಂದಿರುವ ರವಿ ಕುಡಿದು ಆಗಾಗ್ಗೆ ಗಲಾಟೆ ಮಾಡುತ್ತಿದ್ದು, ಪತ್ನಿಗೂ ಕಿರುಕುಳ ನೀಡುತ್ತಿದ್ದನು. ಈ ಹಿನ್ನೆಲೆ ಮನೆಯವರು ಮಾತುಕತೆ ನಡೆಸಿ ಆ ಬಳಿಕ ಪತಿಯಿಂದ ದೂರ ಉಳಿದುಕೊಂಡಿದ್ದ ಪತ್ನಿ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ಸೊರಬದ ತಾಯಿಯ ಮನೆಯಲ್ಲಿ ನೆಲೆಸಿದ್ದರು.

ನಿನ್ನೆ ರಾತ್ರಿ ಹೆಮ್ಮಾಡಿ ಸಮೀಪದಲ್ಲಿ ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕೆ ಪೂರ್ಣಿಮಾ ಬಂದಿದ್ದರು. ಪತಿ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದು, ಪೂರ್ಣಿಮಾ ಕಾರ್ಯಕ್ರಮ ಮುಗಿದ ಬಳಿಕ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ತೆರಳಿ ತಮ್ಮ ತಾಯಿಗೆ ಮಾಹಿತಿ ನೀಡಿದ್ದರು.

ಸೊರಬದಲ್ಲಿ ನೆಲೆಸಿರುವ ಮಕ್ಕಳು ಭಾನುವಾರ ರಾತ್ರಿಯಿಂದಲೇ ತಾಯಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೂರ್ಣಿಮಾ ಅವರ ತಾಯಿ ಹೆಮ್ಮಾಡಿಯಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡಿ ಬರುವಂತೆ ತಿಳಿಸಿದ್ದರು. ಸಂಬಂಧಿಕರು ರಾತ್ರಿ ಹೋಗಿ ನೋಡಿದಾಗ ಲೈಟ್ ಆಫ್ ಇದ್ದ ಕಾರಣ ಮಲಗಿರಬಹುದು ಎಂದು ಅಂದಾಜಿಸಿ ವಾಪಾಸಾಗಿದ್ದರು. ಆದರೆ ಬೆಳಿಗ್ಗೆಯೂ ಕರೆ ಸ್ವೀಕರಿಸದ ಹಿನ್ನೆಲೆ ಮತ್ತೆ ಹೋಗಿ ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಪೂರ್ಣಿಮಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಹೆಂಚು ತೆಗೆದು ಒಳಗೆ ಹೋಗಿ ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ಪೂರ್ಣಿಮಾ ಅವರು ಮನೆಗೆ ಬಂದ ಬಳಿಕ ಪತಿ ಪತ್ನಿ ಮಧ್ಯೆ ಜಗಳವಾಗಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ, ಸಿಪಿಐ ಗೋಪಿಕೃಷ್ಣ, ಠಾಣಾಧಿಕಾರಿ ಪವನ್ ನಾಯ್ಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!