Friday, July 24, 2026
spot_imgspot_img
spot_imgspot_img

ದೇವದುರ್ಗ: ಸಾರಿಗೆ ಬಸ್‌- ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ: ಗರ್ಭಿಣಿ ಸಹಿತ ಇಬ್ಬರು ಮೃತ್ಯು-14 ಜನರಿಗೆ ಗಾಯ

- Advertisement -
- Advertisement -

ದೇವದುರ್ಗ: ತಾಲೂಕಿನ ಕರಿಗುಡ್ಡ ಗ್ರಾಮ ಸಮೀಪ ಮಂಗಳವಾರ ಮಧ್ಯಾಹ್ನ ಸಾರಿಗೆ ಬಸ್ ಮತ್ತು ಆಟೋ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೇವದುರ್ಗ ಪಟ್ಟಣದತ್ತ ಬರುತ್ತಿದ್ದ ಟಂಟಂ ವಾಹನ ಕರಿಗುಡ್ಡ ತಿರುವಿನಲ್ಲಿ ಬಸ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಆಟೋದಲ್ಲಿದ್ದ ಗರ್ಭಿಣಿ ಮೋನಮ್ಮ (25) ಹಾಗೂ ಮಲ್ಲಪ್ಪ (50) ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಮೋನಮ್ಮಸಿರವಾರ ತಾಲೂಕಿನವರಾಗಿದ್ದು, ತವರು ಮನೆ ಕರಿಗುಡ್ಡ ಗ್ರಾಮಕ್ಕೆ ಬಂದಿದ್ದರು. ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಅವರು ಸ್ಕ್ಯಾನಿಂಗ್ ತಪಾಸಣೆಗೆ ಕುಟುಂಬಸ್ಥರೊಂದಿಗೆ ದೇವದುರ್ಗಕ್ಕೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಗರ್ಭದಲ್ಲಿದ್ದ ಮಗು ಕೂಡ ಮೃತಪಟ್ಟಿದೆ. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಲಪ್ಪ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ರೋಹಿತ್ (5) ಎಂಬ ಬಾಲಕನಿಗೆ ಮೂಗಿಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಟಂಟಂ ವಾಹನದಲ್ಲಿದ್ದ ದುರಗಪ್ಪ ಬಾಲಪ್ಪ ಬಾಳಪ್ಪ ಶಿವಮ್ಮ ರೇಣುಕಾ, ಅರಣಕುಮಾರ, ಶಿವರಾಜ ಸೇರಿದಂತೆ ಇತರರು ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನ ಚಾಲಕ ದುರಗಪ್ಪಗೆ ಕೈ-ಕಾಲಿಗೆ ಗಂಭೀರ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಶಾಸಕಿ, ಹೆಚ್ಚುವರಿ ಎಸ್ಪಿ ಭೇಟಿ :


ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಸಕಿ ಕರೆಮ್ಮ ಜಿ. ನಾಯಕ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿದರು.

- Advertisement -

Related news

error: Content is protected !!