ಉಡುಪಿ: ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕ ಮಾಹಿತಿ ಮೇರೆಗೆ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಹಿಳಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ನಾಗರಿಕ ಸಮಿತಿ ಜಂಟಿಯಾಗಿ ಕಾರ್ಯಚರಣೆ ನಡೆಸಿ ಫೆ 8 ರಂದು ಮಕ್ಕಳನ್ನು ರಕ್ಷಿಸಿದ ಘಟನೆ ಉಡುಪಿಯ ಚಿತ್ತರಂಜನ್ ವೃತ್ತದ ಬಳಿಯ ಚಿನ್ನದಂಗಡಿಯಲ್ಲಿ ನಡೆದಿದೆ.
ಚಿನ್ನದ ಪಾಲಿಶಿಂಗ್ ನಲ್ಲಿ ತೊಡಗಿದ್ದ 3 ಬಾಲ ಕಾರ್ಮಿಕರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಮಕ್ಕಳ ಅನಾಥಾಶ್ರಮದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಮಕ್ಕಳ ರಕ್ಷಣಾ ಕಾರ್ಯಚಾರಣೆಯಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತ, ಕಾರ್ಮಿಕ ನಿರೀಕ್ಷಕ ಸಂಜಯ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹೇಶ್ ಮತ್ತು ಯೋಗೀಶ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಜ್ಯೋತಿ ಮತ್ತು ಪ್ರಕಾಶ್, ನಗರ ಠಾಣೆ ಪೊಲೀಸರು ಹಾಗೂ ಇತರರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಮ್ಮ ಸುತ್ತಮುತ್ತಲಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಇಲಾಖೆಯು ಸಾರ್ವಜನಿಕರಲ್ಲಿ ವಿನಂತಿಸಿದೆ. ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ -1098 ಮತ್ತು ಪೊಲೀಸ್ ಇಲಾಖೆ ಸಹಾಯವಾಣಿ-112 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.