Friday, April 19, 2024
spot_imgspot_img
spot_imgspot_img

ಗಾಂಧೀಜಿ ಮರಿ ಮೊಮ್ಮಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ!

- Advertisement -G L Acharya panikkar
- Advertisement -

ಜೊಹಾನ್ಸ್‌ಬರ್ಗ್‌(ದಕ್ಷಿಣ ಆಫ್ರಿಕಾ): ಮಹಾತ್ಮ ಗಾಂಧೀಜಿ ಅವರ 56 ವರ್ಷದ ಮರಿ ಮೊಮ್ಮಗಳಿಗೆ ಹಣಕಾಸು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಮಾಡಿದ ಆರೋಪದಡಿಯಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಆರು ದಶಲಕ್ಷ ಆಫ್ರಿಕನ್‌ ರಾಂಡ್‌ ಅಂದಾಜು ₹3.22 ಕೋಟಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಗಾಂಧೀಜಿಯ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತಾವು ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ ದಕ್ಷಿಣ ಆಫ್ರಿಕಾದ ಉದ್ಯಮಿ ಎಸ್‌.ಆರ್‌ ಮಹರಾಜ್‌ ಎಂಬುವವರ ಬಳಿ ಲತಾ 6.2 ದಶಲಕ್ಷ ರಾಂಡ್‌ ಪಡೆದಿದ್ದು, ತಾವು ಗಳಿಸಿದ ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿದ್ದ ಲತಾ ನಂತರದಲ್ಲಿ ಉದ್ಯಮಿಗೆ ವಂಚಿಸಿದ್ದ ಆರೋಪ ಎದುರಿಸುತ್ತಿದ್ದರು.

ಹೋರಾಟಗಾರ್ತಿ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್‌ಗೋಬಿನ್‌ ಅವರ ಪುತ್ರಿ ಲತಾ ರಾಮ್‌ಗೋಬಿನ್‌. ಪ್ರಕರಣದಲ್ಲಿ ಲತಾ ಅವರಿಗೆ ಶಿಕ್ಷೆ ವಿಧಿಸಿರುವ ಡರ್ಬನ್‌ ವಾಣಿಜ್ಯ ವ್ಯಾಜ್ಯಗಳ ವಿಶೇಷ ನ್ಯಾಯಾಲಯ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಲಾವಕಾಶವನ್ನೂ ನಿರಾಕರಿಸಿದೆ.

ಲತಾ ವಿರುದ್ಧ 2015ರಿಂದಲೂ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ಸಂದರ್ಭದಲ್ಲಿ ಮಾತನಾಡಿದ್ದ ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರದ (ಎನ್‌ಪಿಎ) ಬ್ರಿಗೇಡಿಯರ್ ಹಂಗ್ವಾನಿ ಮುಲಾಡ್ಜಿ, ‘ಭಾರತದಿಂದ ಮೂರು ಕಂಟೇನರ್‌ ಲೆನಿನ್‌ ಬಟ್ಟೆಗಳನ್ನು ತರುತ್ತಿರುವುದಾಗಿ ಉದ್ಯಮಿಯನ್ನು ನಂಬಿಸಲು ಲತಾ ಅವರು ನಕಲಿ ಇನ್‌ವಾಯ್ಸ್‌ ಮತ್ತು ದಾಖಲೆಗಳನ್ನು ಒದಗಿಸಿದ್ದರು,’ ಎಂದು ಹೇಳಿದ್ದರು. ಈ ಮಧ್ಯೆ, ಲತಾ ರಾಮ್‌ಗೋಬಿನ್‌ ಅವರು 50 ಸಾವಿರ ರಾಂಡ್‌ಗ ಭದ್ರತೆ ನೀಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು.

ಲತಾ ರಾಮ್‌ಗೋಬಿನ್ ಅವರು 2015ರ ಆಗಸ್ಟ್‌ನಲ್ಲಿ ‘ನ್ಯೂ ಆಫ್ರಿಕಾ ಅಲೈಯನ್ಸ್’ ಕಂಪನಿ ನಿರ್ದೇಶಕ ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ನ್ಯೂ ಆಫ್ರಿಕಾ ಅಲೈಯನ್ಸ್‌ ಕಂಪನಿಯು ಲೆನಿನ್‌ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ. ಮಹಾರಾಜ್ ಅವರ ಕಂಪನಿಯು ಲಾಭ-ಷೇರು ಆಧಾರದ ಮೇಲೆ ಇತರ ಕಂಪನಿಗಳಿಗೆ ಹಣಕಾಸು ನೆರವು ಒದಗಿಸುತ್ತದೆ. ದಕ್ಷಿಣ ಆಫ್ರಿಕಾದ ನೆಟ್‌ಕೇರ್‌ ಆಸ್ಪತ್ರೆ ಸಮೂಹಗಳಿಗೆ ವಿತರಿಸಲೆಂದು ಭಾರತದಿಂದ ಮೂರು ಕಂಟೇನರ್ ಲಿನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದಾಗಿ ಲತಾ ರಾಮ್‌ಗೋಬಿನ್ ಮಹಾರಾಜ್‌ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!