Tuesday, July 21, 2026
spot_imgspot_img
spot_imgspot_img

ಅಳಿಕೆ: ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಹಳೆಯ ವಿದ್ಯಾರ್ಥಿಗಳ ಸಮಾವೇಶ 2025

- Advertisement -
- Advertisement -

ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉದ್ಘಾಟನೆ-ಸಾಯಿ ಸಮರ್ಪಣಮ್ 2.0 ಸಮಾರಂಭ

ಅಳಿಕೆ: ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ವತಿಯಿಂದ ವಾರ್ಷಿಕ ಹಳೆಯ ವಿದ್ಯಾರ್ಥಿಗಳ ಸಮಾವೇಶ 2025 ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮ, ಸಾಯಿ ಸಮರ್ಪಣಮ್ 2.0 ಸಮಾರಂಭ ನಡೆಯಿತು.

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಶುಭ ಸಂದರ್ಭದಲ್ಲಿ ಟ್ರಸ್ಟ್ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಅಳಿಕೆ ಗ್ರಾಮ ಮತ್ತು ನೆರೆಯ ಗ್ರಾಮಗಳ ಹಲವು ವರ್ಷಗಳ ಕನಸು, ಬಾಲಕಿಯರ ಪದವಿ ಪೂರ್ವ ಕಾಲೇಜು ನನಸಾದ ಐತಿಹಾಸಿಕ ದಿನ.

ಕಾರ್ಯಕ್ರಮವು ಬೆಳಿಗ್ಗೆ 8.00 ಗಂಟೆಗೆ ಹಿರಿಯ ವಿದ್ಯಾರ್ಥಿಗಳ ಸಮಾವೇಶದೊಂದಿಗೆ ಆರಂಭವಾಗಿ ಬೆಳಿಗ್ಗೆ 11.00 ಗಂಟೆಯವರೆಗೆ ನಡೆಯಿತು.

ಬೆಳಿಗ್ಗೆ 11.00 ಗಂಟೆಗೆ ಗಣ್ಯ ಅತಿಥಿಗಳು ಮತ್ತು ಹಿರಿಯರ ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್, ಅಳಿಕೆ ಇದರ ಟ್ರಸ್ಟಿ ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಎಸ್ ಅವರು ಸ್ವಾಗತ ಭಾಷಣ ಮಾಡಿ, ಅತಿಥಿಗಳು, ದಾನಿಗಳು, ಹಳೆಯ ವಿದ್ಯಾರ್ಥಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ನಿಸ್ವಾರ್ಥ ಕೊಡುಗೆಯ ಮಹತ್ವವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಕಾರ್ಯಕ್ರಮದಲ್ಲಿ ದಾನಿಗಳು, ಗುತ್ತಿಗೆದಾರರು ಹಾಗೂ ಹಿರಿಯ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅವರು ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿರುವ ಟ್ರಸ್ಟ್ ಹಾಗೂ ಹಳೆಯ ವಿದ್ಯಾರ್ಥಿಗಳ ಸೇವೆಯನ್ನು ಶ್ಲಾಘಿಸಿದರು.

ಕೌನ್ಸಿಲ್ ಸದಸ್ಯ ಹಾಗೂ ಹಿರಿಯ ವಿದ್ಯಾರ್ಥಿಗಳ ಮುಂದಾಳು ಡಾ. ವಿಕ್ರಮ್ ಶೆಟ್ಟಿ ಅವರು ಬಾಲಕಿಯರ ಪಿಯು ಕಾಲೇಜು ಕಟ್ಟಡ ನಿರ್ಮಾಣದ ಸಂಪೂರ್ಣ ವಿವರಗಳನ್ನು ಮಂಡಿಸಿ, ವಿವಿಧ ಹಂತಗಳ ನಿರ್ಮಾಣ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಎಲ್ಲಾ ದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೌರವ್ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳ ಚಟುವಟಿಕೆಗಳ ರೂಪುರೇಷೆಗಳನ್ನು ವಿವರಿಸಿ, ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಆದರ್ಶಗಳಿಂದ ಪ್ರೇರಿತವಾದ ಶೈಕ್ಷಣಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಗಳಲ್ಲಿ ನಿರಂತರ ಪಾಲ್ಗೊಳ್ಳುವ ಬದ್ಧತೆಯನ್ನು ವ್ಯಕ್ತಪಡಿಸಿದರು.

ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ಇದರ ಟ್ರಸ್ಟಿ ಹಾಗೂ ಅಧ್ಯಕ್ಷ ಪದ್ಮನಾಭ ಪೈ ಅವರು ಮಾತನಾಡಿ, ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.

ಮುಖ್ಯ ಅತಿಥಿಗಳಾದ ಆರ್‌.ಜೆ.ರತ್ನಾಕರ್, ಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್, ಪ್ರಶಾಂತಿ ನಿಲಯಂ, ಪುಟ್ಟಪರ್ತಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಳಿಕೆಯ ಹಳೆಯ ವಿದ್ಯಾರ್ಥಿಗಳು ಮಾಡುತ್ತಿರುವ ಮಾದರಿ ಸೇವಾ ಕಾರ್ಯಗಳನ್ನು ಹೃದಯಪೂರ್ವಕವಾಗಿ ಪ್ರಶಂಸಿಸಿದರು. ಸ್ವಾಮಿಯ ದೈವಿಕ ಸಂಕಲ್ಪವನ್ನು ಕಾರ್ಯರೂಪಕ್ಕೆ ತರುವ ಸಾಧನಗಳಾಗಿ ಹಳೆಯ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ. ನರೇಂದ್ರ ಅವರು ವಂದನಾರ್ಪಣೆ ಸಲ್ಲಿಸಿ, ಸೇವೆ ಸಲ್ಲಿಸುವ ಅವಕಾಶ ದೊರೆತದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಸಂಘಟಕರು, ದಾನಿಗಳು, ಭಾಗವಹಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಕಾರ್ಯಕ್ರಮವು ಮಂಗಳಾರತಿಯೊಂದಿಗೆ ಮುಕ್ತಾಯಗೊಂಡು, ನಂತರ ಎಲ್ಲ ಭಕ್ತರು ಮತ್ತು ಭಾಗವಹಿಸಿದವರಿಗೆ ಭೋಜನ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಆರ್‌. ಜೆ. ರತ್ನಾಕರ್ ಅವರು ಸತ್ಯ ಸಾಯಿ ವಿಹಾರದಲ್ಲಿರುವ ಸ್ವಾಮಿ ಮಂದಿರದ ಸಮೀಪ ನಿರ್ಮಾಣಗೊಳ್ಳಲಿರುವ ಶ್ರೀ ಸಾಯಿ ನಾರಾಯಣ ಕನ್ವೆನ್ಷನ್ ಸೆಂಟರ್ ನ (ಪ್ರಾರ್ಥನಾ ಮಂದಿರ) ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಅಳಿಕೆ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಕೃಷ್ಣ ಭಟ್, ಟ್ರಸ್ಟಿ ಬಿ. ಆರ್. ವಾಸುಕಿ, ಹಿರಿಯರಾದ ಕು. ಕೆ.ವಿ. ವೆಂಕಟಲಕ್ಷ್ಮೀ ಅಮ್ಮ, ಮಧುಸೂದನ ಭಟ್, ಹಿರಿಯ ತ್ಯಾಗಜೀವಿಗಳು, ಗಣ್ಯರು, ಪ್ರಾಂಶುಪಾಲ ವಿ.ಕೆ. ಶರ್ಮ, ಹಿರಿಯ ವಿದ್ಯಾರ್ಥಿ ಸಹೋದರ–ಸಹೋದರಿಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಊರಿನ ಮಹನೀಯರು ಮಾತೆಯರು, ಸಾರ್ವಜನಿಕರು, ಸಂಸ್ಥೆಯ ಕಾರ್ಯಕರ್ತರು, ಹಾಗೂ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!