ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂದು ರಾತ್ರಿ 8 ಗಂಟೆಯಿಂದ ಸಿಲಿಕಾನ್ ಸಿಟಿ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಹೀಗಾಗಿ ಬೆಂಗಳೂರು ನಗರ ಹಾಗೂ ಬೆ.ಗ್ರಾಮಾಂತರ ಜಿಲ್ಲೆಗಳಲ್ಲಿ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಇಂದು ಬೆಳಿಗ್ಗೆಯೇ 144 ಸೆಕ್ಷನ್ ಜಾರಿ
ಇಂದು ಬೆಳಿಗ್ಗೆಯಿಂದಲೇ 144 ಸೆಕ್ಷನ್ ಜಾರಿಯಾಗಿದ್ದು, ರಾತ್ರಿ 8 ಗಂಟೆಯಿಂದ ಗಡಿ ಭಾಗಗಳು ಬಂದ್ ಆಗಲಿವೆ. ಹೀಗಾಗಿ ಅಗತ್ಯ ಸಾಮಾನು ಖರೀದಿ ಹೊರತುಪಡಿಸಿ ಉಳಿದ ಕಾರಣಗಳಿಗೆ ಜನರು ಹೊರಗಡೆ ಬರಬಾರದು ಎಂದು ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಬಾರಿ ಭದ್ರತಾ ಸಿಬ್ಬಂದಿ ಕೊರತೆಯಿಲ್ಲ
ಇನ್ನು ಈ ಬಾರಿ ಭದ್ರತಾ ಸಿಬ್ಬಂದಿ ಕೊರತೆಯಿಲ್ಲ ಎಂದು ಕಮಿಷನರ್ ಭಾಸ್ಕರ್ ಹೇಳಿದ್ದಾರೆ. ಈಗಾಗಲೇ ಸೋಂಕಿಗೀಡಾಗಿರುವ ಪೊಲೀಸ್ ಸಿಬ್ಬಂದಿ ಪೈಕಿ ಹಲವಾರು ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಅದರ ಜತೆಗೆ ಕೆಲವರು ಕ್ವಾರಂಟೈನ್ ಕೂಡ ಮುಗಿಸಿದ್ದಾರೆ.500 ಸಿಬ್ಬಂದಿಗೆ ಕೊರೊನಾ ತಗುಲಿದ್ದರೂ ಅನೇಕ ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನು ಹೆಚ್ಚುವರಿಯಾಗಿ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ.

ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಕಡ್ಡಾಯ
ಮೈಸೂರು ರೋಡ್, ಕನಕಪುರ ರಸ್ತೆ, ತುಮಕೂರು ರಸ್ತೆ, ಕೋಲಾರ, ಹಳೆ ಮದ್ರಾಸ್ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಜಿಲ್ಲೆಯಿಂದ ಹೊರಹೋಗುವ ಮತ್ತು ಜಿಲ್ಲೆಗೆ ಬರುವವರನ್ನು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಲಾಗುತ್ತದೆ. ಹೀಗಾಗಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
