


ಬೆಂಗಳೂರು: ಮಂಡ್ಯ ಮೂಲದ ಯುವಕನೊಬ್ಬನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆರು ಜನರ ಬಾಳಿಗೆ ಬೆಳಕಾದ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ನಡೆದಿದೆ.
ಮಂಡ್ಯದ ಕಸಬಾ ಹೋಬಳಿಯ ಚಿಕ್ಕಮಂಡ್ಯ ಗ್ರಾಮದ ದರ್ಶನ್ ಎಂಬ ಯುವಕ ಫೆ.22ರಂದು ಬೈಕ್ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದನು. ಆರಂಭದಲ್ಲಿ ಮನೆಗೆ ಮರಳಿದ್ದು, ಆತನ ಆರೋಗ್ಯ ಹದಗೆಟ್ಟಾಗ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆಯಲ್ಲಿ ಮೆದುಳಿನ ತೀವ್ರ ರಕ್ತಸ್ರಾವ ಕಂಡುಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ದರ್ಶನ್ ನನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ತಜ್ಞ ವೈದ್ಯರ ತಂಡ ಫೆ.24ರ ಮಂಗಳವಾರದಂದು ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿಸಿದರು.
ರಾಜ್ಯದ ‘ಜೀವಸಾರ್ಥಕತೆ’ ತಂಡದ ಸಮಾಲೋಚನೆಯ ನಂತರ, ಕುಟುಂಬದವರು ನೋವಿನಲ್ಲೂ ಧೈರ್ಯ ಮಾಡಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಇದರಿಂದ ಆತನ ಯಕೃತ್ತು, ಮೂತ್ರಪಿಂಡಗಳು, ಹೃದಯ ನಾಳಗಳು ಮತ್ತು ಇತರ ಅಂಗಗಳನ್ನು ಆರು ಜನ ರೋಗಿಗಳಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ತಿಳಿದುಬಂದಿದೆ.








