ಬೆಂಗಳೂರು, ಫೆ. 24: ರಾಜ್ಯ ರಾಜಕೀಯದಲ್ಲಿ ಹೊಸ ಚೈತನ್ಯ ಮೂಡಿಸುವ ಉದ್ದೇಶದಿಂದ ಮೊದಲ ಬಾರಿಗೆ ಗೆದ್ದ ಯುವ ಕಾಂಗ್ರೆಸ್ ಶಾಸಕರ ಸಭೆ ಬೆಂಗಳೂರಿನಲ್ಲಿ ನಡೆಯಿತು. ಸಭೆಗೆ ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ನೇತೃತ್ವ ವಹಿಸಿದ್ದರು.
ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ 35 ಕಾಂಗ್ರೆಸ್ ಶಾಸಕರಲ್ಲಿ 31 ಮಂದಿ ಭಾಗವಹಿಸಿದ್ದರು. ಒಟ್ಟು 35 ಶಾಸಕರ ಸಹಿಯೊಂದಿಗೆ ಮನವಿಯನ್ನು ಪಕ್ಷದ ಹೈಕಮಾಂಡ್‌ಗೆ ಕಳುಹಿಸಲಾಗಿದೆ. 35 ಶಾಸಕರಲ್ಲಿ ಐದು ಮಂದಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಪ್ರಸ್ತಾಪವನ್ನೂ ರವಿ ಗಣಿಗ ಮುಂದಿಟ್ಟಿದ್ದು, ಯುವ ಶಾಸಕರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಿ ಹೊಸ ಉತ್ಸಾಹ ಹಾಗೂ ಕಾರ್ಯಚಟುವಟಿಕೆ ತರಬೇಕು ಎಂಬ ಸಂದೇಶ ಸಭೆಯಿಂದ ಹೊರಬಂದಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಗಣಿಗ, “ಯುವ ಶಾಸಕರಿಗೆ ಅವಕಾಶ ಸಿಗಬೇಕು. ಎಲ್ಲರೂ ಪ್ರತಿಭಾವಂತರೇ. ಹೊಸದಾಗಿ ಗೆದ್ದವರಿಗೆ ಜವಾಬ್ದಾರಿ ನೀಡಿದರೆ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಂತ್ರಿಮಂಡಲದಲ್ಲಿ ಯುವಕರಿಗೆ ಹೆಚ್ಚಿನ ಪ್ರತಿನಿಧಿತ್ವ ನೀಡುವ ಕುರಿತು ಚರ್ಚೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ಹೆಸರು ಮಂತ್ರಿಗಿರಿಯ ಸ್ಥಾನಕ್ಕೆ ಕೇಳಿಬಂದಿರುವುದಾಗಿ ರವಿ ಗಣಿಗ ತಿಳಿಸಿದರು.“ಐದು ಮಂದಿ ಶಾಸಕರಲ್ಲಿ ಹೊಸದಾಗಿ ಗೆದ್ದವರನ್ನು ನಿರ್ಲಕ್ಷ್ಯ ಮಾಡಬಾರದು. ಅವರಿಗೆ ಮಂತ್ರಿ ಸ್ಥಾನ ನೀಡಿ ಹೊಸತನ ತರಬೇಕು. ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಗೆಲ್ಲುವಂತಹ ಅವಕಾಶ ಕಡಿಮೆ ಎಂದು ಹೇಳಲಾಗುತ್ತಿದ್ದರೂ ಅವರು ಗೆದ್ದು ಬಂದಿದ್ದಾರೆ. ಅವರಿಗೆ ಜವಾಬ್ದಾರಿ ನೀಡಿ ‘ಮಂಗಳೂರನ್ನು ಗೆದ್ದು ಬನ್ನಿ, ಮಂತ್ರಿ ಮಾಡುತ್ತೇವೆ’ ಎಂಬ ಟಾಸ್ಕ್ ಕೊಟ್ಟರೆ ಅವರು ಹಗಲು-ರಾತ್ರಿ ಶ್ರಮಿಸುತ್ತಾರೆ” ಎಂದು ಹೇಳಿದರು. ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿ ಹಾಗೂ ಕ್ಷೇತ್ರದಲ್ಲಿ ತೋರಿದ ಸಾಮರ್ಥ್ಯವನ್ನು ಉಲ್ಲೇಖಿಸಿದ ರವಿ ಗಣಿಗ, ಯುವ ನಾಯಕರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಇದೇ ವೇಳೆ ಪ್ರಾದೇಶಿಕ ಸಮತೋಲನದ ದೃಷ್ಟಿಯಿಂದ ಚಿಕ್ಕಮಗಳೂರು ಕ್ಷೇತ್ರದ ಶಾಸಕಿ ನಯನ ಹಾಗೂ ಮಧ್ಯ ಕರ್ನಾಟಕ ಭಾಗದ ಶಾಸಕ ಶಿವ ಗಂಗಾ ಅವರಿಗೆ ಅವಕಾಶ ನೀಡಬೇಕು ಎಂದು ಕೂಡ ಅವರು ಸೂಚಿಸಿದರು.








