Monday, July 20, 2026
spot_imgspot_img
spot_imgspot_img

LPG ಕೊರತೆಯ ಆತಂಕಕ್ಕೆ ಸೈಬರ್ ವಂಚಕರ ಬಲೆ; ನಕಲಿ ಫಾರಂ ಭರ್ತಿ ಮಾಡಿಸಿ 4 ಲಕ್ಷ ರೂ. ದೋಚಿದ ಖದೀಮರು

- Advertisement -
- Advertisement -

ಗ್ಯಾಸ್ ಕಂಪನಿ ಹೆಸರಿನಲ್ಲಿ ಕರೆ – ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಸಿದ ಬಳಿಕ ಬ್ಯಾಂಕ್ ಖಾತೆ ಖಾಲಿ

ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಉಂಟಾಗಿರುವ LPG ಸಿಲಿಂಡರ್ ಕೊರತೆಯ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು ಮಹಾರಾಷ್ಟ್ರದಲ್ಲಿ ಇಬ್ಬರು ಮಹಿಳೆಯರನ್ನು ಗುರಿಯಾಗಿಸಿ ಸುಮಾರು 4 ಲಕ್ಷ ರೂ.ಗಳನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಕಲ್ಯಾಣ–ಡೊಂಬಿವಲಿ ಪ್ರದೇಶದ ಇಬ್ಬರು ಮಹಿಳೆಯರು ಅಪರಿಚಿತ ವ್ಯಕ್ತಿಯಿಂದ ಬಂದ ದೂರವಾಣಿ ಕರೆಯನ್ನು ಸ್ವೀಕರಿಸಿದ್ದರು. ಕರೆ ಮಾಡಿದ ವ್ಯಕ್ತಿ ತಾನು ಗ್ಯಾಸ್ ಸರಬರಾಜು ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಂಡು, ಅನಿಲ ಸೇವೆಯ ಮಾಹಿತಿಯನ್ನು ನವೀಕರಿಸಲು ಫಾರಂ ಭರ್ತಿ ಮಾಡಬೇಕೆಂದು ತಿಳಿಸಿದ್ದಾನೆ.ಇದಕ್ಕಾಗಿ ಮಹಿಳೆಯರ ಮೊಬೈಲ್‌ ಫೋನ್‌ಗೆ ಎಪಿಕೆ (APK) ಫೈಲ್ ಕಳುಹಿಸಿ ಅದನ್ನು ಡೌನ್‌ಲೋಡ್ ಮಾಡಿ ತೆರೆಯುವಂತೆ ಸೂಚಿಸಿದ್ದಾನೆ.

ಮಹಿಳೆಯರು ಫಾರಂ ಭರ್ತಿ ಮಾಡಿದ ಬಳಿಕ ಅವರ ಬ್ಯಾಂಕ್ ಖಾತೆಗಳಿಂದ ಒಟ್ಟು ಸುಮಾರು 4 ಲಕ್ಷ ರೂ. ಹಣ ಮಾಯವಾಗಿರುವುದು ನಂತರ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಡೊಂಬಿವಲಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಎಸಿಪಿ ಸುಹಾಶ್ ಹೆಮಾಡೆ ತಿಳಿಸಿದ್ದಾರೆ.ಇದಕ್ಕೂ ನಡುವೆ ದೇಶದ ಹಲವು ನಗರಗಳಲ್ಲಿ ಗೃಹಬಳಕೆ ಹಾಗೂ ವಾಣಿಜ್ಯ LPG ಸಿಲಿಂಡರ್‌ಗಳ ಕೊರತೆ ಕಂಡುಬಂದಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಹಲವರು ಹೆಚ್ಚುವರಿ ಸಿಲಿಂಡರ್ ಖರೀದಿಸಲು ಮುಗಿಬೀಳುತ್ತಿರುವುದೂ ವರದಿಯಾಗಿದೆ.ಇದೇ ರೀತಿಯ ಸೈಬರ್ ವಂಚನೆ ಪ್ರಕರಣಗಳು ತೆಲಂಗಾಣದಲ್ಲಿಯೂ ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಎಚ್ಚರಿಕೆ ನೀಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್, ಸೈಬರ್ ಅಪರಾಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಜಾಹೀರಾತುಗಳನ್ನು ಹರಡುತ್ತಿದ್ದು, ತಕ್ಷಣ ಸಿಲಿಂಡರ್ ವಿತರಣೆಯ ಭರವಸೆ ನೀಡಿ ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ವಾಟ್ಸ್ಆ್ಯಪ್ ಹಾಗೂ ಎಸ್‌ಎಂಎಸ್ ಮೂಲಕ ನಕಲಿ ವೆಬ್‌ಸೈಟ್ ಲಿಂಕ್‌ಗಳನ್ನು ಕಳುಹಿಸಿ ಮೊದಲು ಹಣ ಪಾವತಿಸಿದರೆ ಸಿಲಿಂಡರ್ ತಕ್ಷಣ ನೀಡುವುದಾಗಿ ಹೇಳುವ ಸಂದೇಶಗಳು ಬಂದರೆ ಅದು ಖಂಡಿತ ಸೈಬರ್ ವಂಚನೆ ಎನ್ನುವುದನ್ನು ಜನರು ಅರಿತುಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.

ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಬ್ಯಾಂಕ್ ಖಾತೆ ವಿವರಗಳು, ಒಟಿಪಿ, ಯುಪಿಐ ಪಿನ್ ಮುಂತಾದ ಮಾಹಿತಿಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

- Advertisement -

Related news

error: Content is protected !!