Saturday, August 22, 2026
spot_imgspot_img
spot_imgspot_img

ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣ -ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

- Advertisement -
- Advertisement -

ಪುತ್ತೂರು: ವಾಲ್ಮೀಕಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಶುಕ್ರವಾರ ಮಿನಿ ವಿಧಾನಸೌಧದ ಎದುರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿದ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು. ದಲಿತ ಕಾರ್ಡ್ ಬಳಸಿಕೊಂಡು ವಾಲ್ಮೀಕಿ ನಿಗಮದ ₹187 ಕೋಟಿ ಹಣ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ವಿಚಾರವನ್ನು ಅಂದಿನ ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ನಾಟಕದ ಪಕ್ಷವಾಗಿದೆ ಎಂದು ಟೀಕಿಸಿದ ಅವರು, ರಾಷ್ಟ್ರಪ್ರೇಮದ ಗೀತೆ ‘ವಂದೇ ಮಾತರಂ’ಗೆ ಅಡ್ಡಿಪಡಿಸಿದ್ದೀರಿ. ನಿಮ್ಮ ಪಕ್ಷಕ್ಕೆ ದೇಶ ಹಾಗೂ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂದು ಆರೋಪಿಸಿದರು. ಚಾಮರಾಜನಗರದಲ್ಲಿ ನಾಗರಿಕರನ್ನು ಎನ್‌ಕೌಂಟರ್ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಪುತ್ತೂರು ಶಾಸಕರು ಸುಳ್ಳು ಅಭಿವೃದ್ಧಿಯ ಮಾತುಗಳನ್ನು ಹೇಳಿಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಯತೀಶ್ ಅರ್ವಾರ್, ಪುತ್ತೂರು ಹಾಗೂ ವಿಟ್ಲದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ದಾಖಲೆಗಳನ್ನು ಬಿಡುಗಡೆ ಮಾಡುವ ಧೈರ್ಯ ತೋರಿಸಲಿ ಎಂದು ಸವಾಲು ಹಾಕಿದರು. ಶಾಸಕರಿಗೆ ರೀಲ್ಸ್ ಮಾಡುವ ಅಭ್ಯಾಸವಿದ್ದರೆ, ‘ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿದ್ದೇವೆ’ ಎಂಬುದರ ಬಗ್ಗೆಯೂ ರೀಲ್ಸ್ ಮಾಡಲಿ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಭಜನೆ ಹಾಡುವ ಮೂಲಕ ರಾಜ್ಯ ಸರ್ಕಾರದ ವೈಫಲ್ಯಗಳಿಗೆ ಶೋಕ ವ್ಯಕ್ತಪಡಿಸಲಾಯಿತು. ಬಳಿಕ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಮುಖಂಡರಾದ ಬೂಡಿಯಾರು ರಾಧಾಕೃಷ್ಣ ರೈ, ಹರೀಶ್ ಬಿಜತ್ರೆ, ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್ ಆಳ್ವ, ರಫೀಕ್ ದರ್ಬೆ, ಪ್ರಸನ್ನ ಮಾರ್ತಾ, ಜಿಲ್ಲಾ ಕಾರ್ಯದರ್ಶಿಗಳಾದ ವಿದ್ಯಾ ಆರ್. ಗೌರಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಆರ್.ಸಿ. ನಾರಾಯಣ, ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!