ಮೈಸೂರು : ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಇದರ ಜೊತೆಗೆ ಡ್ರೋನ್ ಪ್ರತಾಪ್ ನಕಲಿ ವಿಜ್ಞಾನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಯಲಾಗುತ್ತಿದ್ದಂತೆ ಅವರ ಮೇಲೆ ಕಮಿಷನರ್ ಅವರಿಗೆ ದೂರು ನೀಡಲಾಗಿತ್ತು.
ಡ್ರೋನ್ ಪ್ರತಾಪ್ ಅವರು ಹೈದರಾಬಾದ್ ನಿಂದ ಜುಲೈ 15ರಂದು ಬಂದಿದ್ದು ಅವರಿಗೆ ಕರೆನ್ಸಿ ಹಾಕಲಾಗಿತ್ತು. ಆದರೆ ಹದಿನಾರನೇ ತಾರೀಕಿನಂದು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಲೈವ್ ಶೋನಲ್ಲಿ ಸ್ವತಹ ಪ್ರತಾಪ್ ಅವರು ತಾನು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಬಂದಿರುವುದಾಗಿ ತಿಳಿಸಿದರು.ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್ ಐ ಆರ್ ಆಗಿತ್ತು.
ಶನಿವಾರ ಬೆಳಿಗ್ಗೆ 10 ಗಂಟೆಯಲ್ಲಿ ಅಂಜನಾಪುರದ ಪ್ರತಾಪ್ ಇರುವ ಅಪಾರ್ಟ್ಮೆಂಟ್ ಗೆ ಬಿಬಿಎಂಪಿ ಸಿಟಿ ಸ್ಕ್ವಾಡ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರತಾಪ್ ಮನೆಯಲ್ಲಿಲ್ಲ ಎಂದು ತಿಳಿದುಬಂದಿದೆ. ಬಂಧನದ ಭೀತಿಯಿಂದ ಪ್ರತಾಪ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದನು. ಫೋನ್ ಲೊಕೆಶನ್ ಟ್ರ್ಯಾಕ್ ಮಾಡಿದ ಪೊಲೀಸರಿಗೆ ಆತ ಕೊನೆಯದಾಗಿ ಜ್ಞಾನಭಾರತಿ ವಿವಿ ಕ್ಯಾಂಪಸ್ ನ ಲೊಕೆಶನ್ ತೋರಿಸಿತ್ತು. ಆನಂತರ ಆತನಿಗೆ ಬಂದಿದ್ದ ಕರೆಗಳ ಮಾಹಿತಿ ಸಂಗ್ರಹಿಸಿ ಆತನನ್ನು ಹುಡುಕಲು ಪ್ರಾರಂಭಿಸಿದ್ದರು.
ಸಧ್ಯ ಇದೀಗ ಪ್ರತಾಪ್ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ಮೈಸೂರಿನಲ್ಲಿ ಕ್ವಾರಂಟೈನ್ ನಲ್ಲಿ ಇರುತ್ತೇನೆ ಎಂದು ಪ್ರತಾಪ್ ಮೈಸೂರಿನಲ್ಲಿಯೇ ಉಳಿದಿದ್ದಾನಂತೆ. ಪ್ರತಾಪ್ ನನ್ನು ಕರೆತರಲು ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಮೈಸೂರಿಗೆ ಹೊರಟಿದ್ದಾರೆ. ಮೈಸೂರಿನಿಂದ ಕರೆತಂದು ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆನಂತರ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಕ್ರಮ ಕೈಗೊಳ್ಳಲಿದ್ದಾರೆ.