ಮಣಿಪಾಲ: ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ನಲ್ಲಿ ಫೋಟೋ ತೆಗೆದು ಪ್ರಸಾರ ಮಾಡಲು ಯತ್ನಿಸಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಎ.5ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆ.ಇ.ಇ ಮೈನ್ಸ್ ಪರೀಕ್ಷೆ ನಡೆದಿದ್ದು, ಪರೀಕ್ಷೆಯನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆಸಲಾಗಿತ್ತು.ಬೆಳಿಗ್ಗೆ ಸುಮಾರು 149 ಮಕ್ಕಳು ಮಧ್ಯಾಹ್ನ 133 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಮಧ್ಯಾಹ್ನ 3 ಗಂಟೆಯಿಂದ ಪರೀಕ್ಷೆ ಪ್ರಾರಂಭವಾಗಿದ್ದು, ಪರೀಕ್ಷೆಗೆ ಒಳಗೆ ಬರುವ ವಿದ್ಯಾರ್ಥಿಗಳಿಗೆ ವಿಳಾಸದ ಮಾಹಿತಿ ಬಗ್ಗೆ ಮೂಲ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಪರೀಕ್ಷೆಯ ಹಾಲ್ ಟಿಕೇಟ್ ತೆಗೆದುಕೊಂಡು ಬರಲು ಅನುಮತಿ ಇರುತ್ತದೆ.
ಆದರೆ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ಉತ್ತರಖಂಡದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್ ಪರೀಕ್ಷೆಯ ಸಮಯ ಪರೀಕ್ಷಾ ಹಾಲ್ನಲ್ಲಿ ಕಂಪ್ಯೂಟರ್ ಸಿಸ್ಟಮ್ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ಆತನ ಮೊಬೈಲಿನಿಂದ ಸಂಪೂರ್ಣ ಪೋಟೋ ತೆಗೆದು ಅದನ್ನು ಹೊರಗಡೆ ಕಳುಹಿಸಿ ಪ್ರಸಾರ ಮಾಡಲು ಯತ್ನಿಸಿದ್ದಾನೆ ಎಂದು ಪರೀಕ್ಷಾ ಕೇಂದ್ರದ ಪರಿವೀಕ್ಷಕ ವಿ.ಕೆ ಮನೋಹರ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.







