


ಬೆಂಗಳೂರು : ಸಂವಿಧಾನದ ವಿಧಿಯ ಪ್ರಕಾರ ಸಚಿವರ ಸಂಖ್ಯೆಯು ಒಟ್ಟು ಶಾಸಕರ ಸಂಖ್ಯೆ ಶೇ.15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಗಿಂತ ಹೆಚ್ಚು ಮಂದಿಗೆ ಸರಕಾರ ವೇತನ ನೀಡಲಾಗದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ 34 ಮಂದಿ ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ದಿಲ್ಲಿ ವಿಶೇಷ ಪ್ರತಿನಿಧಿ, ಸಿಎಂ ರಾಜಕೀಯ ಕಾರ್ಯದರ್ಶಿ ಸಹಿತ ಹಲವು ಶಾಸಕರಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು ಸಂವಿಧಾನಬಾಹಿರ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಸೂರಿ ಪಾಯಲ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಾಲಿ ಅರ್ಜಿ ಸಲ್ಲಿಸಿದಾಗ 46 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದರು. ಈಗ 129 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದಾರೆ.

ನಾವು ಸರಕಾರದ ಆದೇಶವನ್ನು ಮಾತ್ರ ಪ್ರಶ್ನಿಸುತ್ತೇವೆ. ಎಲ್ಲ ಪ್ರತಿವಾದಿಗಳನ್ನು ಡಿಲೀಟ್ ಮಾಡಬಹುದು. ಶಾಸಕರು ಫಲಾನುಭವಿಗಳಾಗಿದ್ದಾರೆ. ಸರಕಾರದ ಆದೇಶ ಕಾರ್ಯಕಾರಿ ಆದೇಶ ರೂಪದಲ್ಲಿದ್ದು, ಅದು ಮತ್ತೆ ಅಂಥ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ರಾಜ್ಯ ಸರಕಾರವು ಹೊಸದಾಗಿ ಆಯೋಗ, ಸಮಿತಿ, ಪ್ರಾಧಿಕಾರ, ಮಿಷನ್, ಕಾರ್ಯಪಡೆಗಳನ್ನು ರೂಪಿಸಿ ಅದಕ್ಕೆ ಶಾಸಕರನ್ನು ನೇಮಿಸಿ ಅಧ್ಯಕ್ಷರನ್ನಾಗಿಸಿದೆ. ನಾವು ವೈಯಕ್ತಿಕವಾಗಿ ಶಾಸಕರು/ಸಚಿವರ ವಿರುದ್ಧವಿಲ್ಲ. ಸರಕಾರದ ಆದೇಶದ ವಿರುದ್ಧ ಮಾತ್ರ ಇದ್ದೇವೆ. ಅಧ್ಯಕ್ಷರು/ಮುಖ್ಯಸ್ಥರಿಗೆ ಕರ್ನಾಟಕ ಸಚಿವರು ವೇತನ, ಭತ್ತೆ ಕಾಯ್ದೆ 1956ರ ವೇತನ ಸಿಗಲಿದೆ. ಈಗ ಶಾಸಕರಿಗೆ ಸಚಿವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದರು.ಆಗ ನ್ಯಾಯಪೀಠ, ಸಂವಿಧಾನದ 164(1ಎ) ವಿಧಿ ಪ್ರಕಾರ ಸಚಿವರ ಸಂಖ್ಯೆಯು ಶೇ. 15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಸಿರುವ ಮಂದಿಗಿಂತ ಹೆಚ್ಚು ಮಂದಿಗೆ ನಿಮಗೆ ವೇತನ ನೀಡಲಾಗುವುದಿಲ್ಲ ಎಂದು ಹೇಳಿತು.ಅಂತಿಮವಾಗಿ, ಪ್ರತಿವಾದಿಗಳನ್ನಾಗಿಸಿರುವ ಶಾಸಕರ ವಿರುದ್ಧ ಯಾವುದೇ ಕೋರಿಕೆ ಇಲ್ಲವಾದ್ದರಿಂದ ಅವರನ್ನು ಪ್ರತಿವಾದಿಗಳ ಸ್ಥಾನದಿಂದ ತೆಗೆಯಬಹುದು. 2020ರ ಅಕ್ಟೋಬರ್ 7ರಂದು ರಾಜ್ಯ ಸರಕಾರ ಹೊರಡಿಸಿರುವ ಸರಕಾರದ ಆದೇಶವನ್ನು ಮಾತ್ರ ಅರ್ಜಿದಾರರು ಪ್ರಶ್ನಿಸಿದ್ದಾರೆ ಎಂದು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿತು.








