


ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಇಡ್ಕಿದು ಸೇವಾ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, ಸದಸ್ಯರ ವಿಶ್ವಾಸಕ್ಕೆ ತಕ್ಕಂತೆ ನಿರಂತರ ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಘವು ಸುಮಾರು ₹923.42 ಕೋಟಿ ಮೊತ್ತದ ಒಟ್ಟು ವ್ಯವಹಾರ ಮಾಡಿ ಈ ಸಾಲಿನಲ್ಲಿ 2.85ಕೋಟಿ ನಿವ್ವಳ ಲಾಭ ಗಳಿಸಿ ಆರ್ಥಿಕವಾಗಿ ಸದೃಢ ಸಂಸ್ಥೆಯಾಗಿ ಹೊರಹೊಮ್ಮಿದೆ
ಸಂಘದಲ್ಲಿ ಸದಸ್ಯರ ಷೇರು ಬಂಡವಾಳವು ಸುಮಾರು ₹4.45 ಕೋಟಿ ತಲುಪಿದ್ದು, ವಿವಿಧ ಮೀಸಲು ನಿಧಿಗಳು ಹಾಗೂ ಅಭಿವೃದ್ಧಿ ನಿಧಿಗಳು ಮತ್ತಷ್ಟು ಬಲಗೊಂಡಿವೆ. ಸದಸ್ಯರಿಂದ ಸಂಗ್ರಹಿಸಿದ ಠೇವಣಿಗಳ ಮೊತ್ತ ಸುಮಾರು ₹121.00 ಕೋಟಿ ತಲುಪಿರುವುದು ಸಂಘದ ಮೇಲಿನ ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಸಂಘವು ಕೃಷಿ, ಮನೆ ನಿರ್ಮಾಣ, ಚಿನ್ನಾಭರಣ, ವಾಹನ, ಶಿಕ್ಷಣ, ವ್ಯಾಪಾರ ಹಾಗೂ ಇತರೆ ವಿವಿಧ ಉದ್ದೇಶಗಳಿಗೆ ಸುಮಾರು ₹84.86ಕೋಟಿಗೂ ಅಧಿಕ ಸಾಲವನ್ನು ವಿತರಿಸಿ ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಸಂಘದ ನಗದು, ಬ್ಯಾಂಕ್ ಠೇವಣಿಗಳು, ಸ್ಥಿರಾಸ್ತಿಗಳು, ಹೂಡಿಕೆಗಳು ಹಾಗೂ ಇತರ ಆಸ್ತಿಗಳು ದೃಢ ಆರ್ಥಿಕ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತಿವೆ. ಸದಸ್ಯರಿಗೆ ಆಧುನಿಕ ಬ್ಯಾಂಕಿಂಗ್ ಹಾಗೂ ಸಹಕಾರ ಸೇವೆಗಳನ್ನು ನೀಡುವಲ್ಲಿ ಸಂಘ ಯಶಸ್ವಿಯಾಗಿದೆ.
ಸಂಘವು ಕೇವಲ ಬ್ಯಾಂಕಿಂಗ್ ಸೇವೆಗಳಿಗೆ ಸೀಮಿತವಾಗದೆ, ಸದಸ್ಯರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದು, ಯಶಸ್ವಿನಿ ಆರೋಗ್ಯ ವಿಮೆ, ಬೆಳೆ ವಿಮೆ, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಸಹಕಾರಿ ಯೋಜನೆಗಳ ಮಾಹಿತಿಯನ್ನು ಸಕಾಲದಲ್ಲಿ ಸದಸ್ಯರಿಗೆ ತಲುಪಿಸುವ ಮೂಲಕ ಸೇವೆಯನ್ನು ವಿಸ್ತರಿಸುತ್ತಾ ಬಂದಿದೆ. ಆರೋಗ್ಯಾಮೃತ ಯೋಜನೆಯಲ್ಲಿ ಪ್ರಧಾನ ಮಂತ್ರಿ ಜನೌಷದಿ ಕೇಂದ್ರ ವಿಧ್ಯಾಮೃತ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಯಲ್ಲಿಯೂ ತೊಡಗಿಕೊಂಡಿದೆ.
ಸಂಘದ ವ್ಯಾಪ್ತಿಯ ಪ್ರಮುಖ ರಸ್ತೆಗೆ ಕಾಂಕ್ರೀಟೀಕರಣ ಗೊಳಿಸಿ ಜಿಲ್ಲೆಯ ಮೊದಲ ಸಾರ್ವಜನಿಕ ಸಹಕಾರಿ ಪಥ ನಿರ್ಮಿಸಿದ ಸಹಕಾರಿ ಸಂಘ ನಮ್ಮದು. “ಸದಸ್ಯ ಠೇವಣಿದಾರರ ಅಚಲ ನಂಬಿಕೆ ಹಾಗೂ ಸಾಲಗಾರರ ಶಿಸ್ತಿನ ಸಕಾಲದ ಸಾಲ ಮರುಪಾವತಿ ಸಂಸ್ಥೆಯ ಪ್ರಗತಿಗೆ ಭದ್ರ ಅಡಿಪಾಯವಾಗಿ, ಅಭಿವೃದ್ಧಿಯ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಸಹಕಾರಿಯಾಗಿದೆ”.
ಸಂಘದ ನಿರ್ದೇಶಕ ಮಂಡಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಯ ಸಮರ್ಪಿತ ಸೇವೆಯಿಂದ ಈ ಸಾಧನೆ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು ಹೇಳಿದರು.
ಆಡಳಿತ ಮಂಡಳಿ ಸದಸ್ಯರಾದ ಸಂಘದ ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ, ನಿರ್ದೇಶಕರಾದ ಚಂದ್ರಹಾಸ ಕೆಂರ್ದೆಲು, ಜಯಂತ ಕಂಪ, ನವೀನ ಕೆ.ಪಿ. ಪಾಂಡೇಲು, ಹೃಷಿಕೇಶ್ ಮುಕ್ಕುಡ,ಉಮೇಶ ವಡ್ಯರ್ಪೆ, ಲೋಹಿತಾಶ್ವ ಎಂ. ಮುಂಡ್ರಬೈಲು, ಸತೀಶ ಕೆ. ಅಳಕೆಮಜಲು, ಆನಂದ ಕೆ. ಅಡ್ಯಾಲು, ಶ್ರೀಮತಿ ಪದ್ಮಾವತಿ ಕುವೆತ್ತಿಲ.ವಿದ್ಯಾ ವಿ. ಮುದಲೆಗುಂಡಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ್ ಮೇಲಾಂಟ ಉಪಸ್ಥಿತರಿದ್ದರು.
“ಸದಸ್ಯರ ವಿಶ್ವಾಸವೇ ನಮ್ಮ ಶಕ್ತಿ – ಗ್ರಾಮೀಣ ಅಭಿವೃದ್ಧಿಯೇ ನಮ್ಮ ಗುರಿ” ಎಂಬ ಸಂಕಲ್ಪದಲ್ಲಿ ಇಡ್ಕಿದು ಸೇವಾ ಸಹಕಾರ ಸಂಘವು ಇನ್ನಷ್ಟು ಪ್ರಗತಿಯತ್ತ ಸಾಗುತ್ತಿದೆ.








