



ಬೆಂಗಳೂರು : ಅತ್ಯಾಚಾರ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ (ಸದ್ಯ ಅಮಾನತುಗೊಂಡಿರುವ) ಪಿ.ಜಿ. ಸಂದೇಶ್ ಬಂಧನಕ್ಕೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್‌ಐಆರ್ ರದ್ದು ಕೋರಿ ಪಿ.ಜಿ. ಸಂದೇಶ್ ಸೇರಿ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಏಕಸದಸ್ಯ ನ್ಯಾಯಪೀಠ ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆಯನ್ನು ಎಪ್ರಿಲ್ 6ಕ್ಕೆ ಮುಂದೂಡಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿಯ ಮುಂದಿನ ವಿಚಾರಣೆಯ ವರೆಗೆ ಇನ್‌ಸ್ಪೆಕ್ಟರ್ ಸಂದೇಶ್‌ರನ್ನು ಬಂಧಿಸದಂತೆ ಮಧ್ಯಂತರ ತಡೆ ನೀಡಬೇಕು ಎಂದು ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು.
ಸಂತ್ರಸ್ತ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡುಬಿದಿರೆ ಇನ್‌ಸ್ಪೆಕ್ಟರ್ ಆಗಿದ್ದ ಸಂದೇಶ್ ವಿರುದ್ದ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 376(2)(2)(1), 376(2)(2), 384, 506 ಅಡಿ ಎಫ್‌ಐಆರ್ ದಾಖಲಾಗಿದೆ.
ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ, ಪೊಲೀಸ್ ಪ್ರಾಥಮಿಕ ತನಿಖೆ ಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.








