Thursday, March 28, 2024
spot_imgspot_img
spot_imgspot_img

ಎರಡು ತಲೆ ಹಾವಿಗಾಗಿ ಕೊಲೆ; ಹತ್ಯೆಗೈದು ನದಿಗೆಸೆದಿದ್ದ ತಂದೆ, ಮಗನ ಬಂಧನ!

- Advertisement -G L Acharya panikkar
- Advertisement -

ಕಲಬುರ್ಗಿ: ಎರಡು ತಲೆಯ ಹಾವಿಗಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದ ತಂದೆ ಮಗನನ್ನು ಬಂಧಿಸುವಲ್ಲಿ ಕಲಬುರ್ಗಿ ಜಿಲ್ಲೆ ಕಮಲಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮಚಂದ್ರ ಚಿಲಾನೋರ ಹಾಗೂ ಭರತ್ ಚಿಲಾನೋರ ಬಂಧಿತ ಆರೋಪಿಗಳಾಗಿದ್ದಾರೆ. ರಾಮಚಂದ್ರ ಚಿಲಾನೋರ ಮತ್ತು ಆತನ ಮಗ ಸೇರಿ ನವೆಂಬರ್ 4 ರಂದು ಸಿದ್ರಾಮಪ್ಪ ಸಾಸರವಗ್ಗೆ ಎಂಬಾತನನ್ನು ಕೊಲೆ ಮಾಡಿದ್ದರು. ಕೊಲೆಯಾದ ಸಿದ್ರಾಮಪ್ಪ ಪಟವಾದ ಗ್ರಾಮದ ಮುಲ್ಲಾಮಾರಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದ.

ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಪಟವಾದ ಗ್ರಾಮದಲ್ಲಿ ಕೊಲೆಯಾಗಿದ್ದ ಸಿದ್ರಾಮಪ್ಪ ಸಾಸರವಗ್ಗೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಕೊಡಂಬಲ ಗ್ರಾಮದ ನಿವಾಸಿಯಾಗಿದ್ದ. ಸಿದ್ಧರಾಮಪ್ಪ ಸಾಸರವಗ್ಗೆ ಹಾಗೂ ರಾಮಣ್ಣ ಚಿಲಾನೋರ ಸೇರಿ ಎರಡು ತಲೆಯ ಹಾವನ್ನು ಹಿಡಿದು ತಂದಿದ್ದರು. ನಂತರ ಎರಡು ತಲೆಯ ಹಾವನ್ನು ರಾಮಣ್ಣನ ಮನೆಯಲ್ಲೇ ಇಟ್ಟಿದ್ದ ಸಿದ್ರಾಮಪ್ಪ ತನ್ನ ಊರಿಗೆ ಹೊರಟು ಹೋಗಿದ್ದ. ಸಿದ್ರಾಮಪ್ಪನಿಗೆ ತಿಳಿಯದ ಹಾಗೆ ಹಾವನ್ನು ರಾಮಣ್ಣ ಕದ್ದುಮುಚ್ಚಿ ಶ್ರೀಮಂತ ಎಂಬಾತನಿಗೆ ಮಾರಿದ್ದ. ಹಾವು ಮಾರಾಟ‌‌ ಮಾಡಿರುವ ವಿಚಾರನ್ನು ಸಿದ್ರಾಮಪ್ಪನ ಬಳಿ ರಾಮಣ್ಣ ಮುಚ್ಚಿಟ್ಟಿದ್ದ.

ನವೆಂಬರ್ 4ರಂದು ರಾಮಣ್ಣನ ಮನೆಗೆ ತೆರಳಿ‌ದ್ದ ಸಿದ್ರಾಮಪ್ಪ ಎರಡು ತಲೆಯ ಹಾವು ಕೊಡುವಂತೆ ಗಲಾಟೆ ತೆಗೆದು ಜಗಳ ಮಾಡಿದ್ದ. ಹಾವು ಕೊಡೋದಕ್ಕೆ ಹಿಂದೇಟು ಹಾಕಿದ್ದ ರಾಮಣ್ಣನಿಗೆ ಅವಾಚ್ಯ ಶಬ್ದಗಳಿಂದ ಸಿದ್ರಾಮಪ್ಪ ನಿಂದಿಸಿದ್ದ. ಅವಾಚ್ಯ ಶಬ್ದಗಳ ನಿಂದನೆ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ರಾಮಣ್ಣನ ಮಗ ಭರತ್, ಸಿದ್ರಾಮಪ್ಪನ ಕತ್ತಿಗೆ ಚಾಕುವಿನಿಂದ ಇರಿದಿದ್ದ.

ಈ ವೇಳೆ ಮಗನಿಗೆ ಸಾಥ್ ನೀಡಿದ್ದ ರಾಮಣ್ಣ, ಮಚ್ಚಿನಿಂದ ಸಿದ್ರಾಮಪ್ಪನಿಗೆ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಸಿದ್ರಾಮಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.ನಂತರ ಸಿದ್ರಾಮಪ್ಪನ ಶವವನ್ನು ಕೌದಿಯಲ್ಲಿ ಕಟ್ಟಿ ತಮ್ಮದೇ ಟಿವಿಎಸ್ ಬೈಕ್ ಮೇಲೆ ತಂದು ಪಟವಾದ ಹಳ್ಳದ ಸೇತುವೆ ಬಳಿ ಎಸೆದು ತಂದೆ ಮತ್ತು ಮಗ ಎಸ್ಕೇಪ್ ಆಗಿದ್ದರು. ನದಿಯಲ್ಲಿ ಶವ ತೇಲುತ್ತಿರುವುದು ಗಮನಕ್ಕೆ ಬಂದ ನಂತರ ಕಮಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಕಾರಣ ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಾಗ ಕೊಲೆಯ ಅಸಲಿಯತ್ತು ಬಹಿರಂಗಗೊಂಡಿದೆ. ಎರಡು ತಲೆ ಹಾವಿಗಾಗಿ ಸಿದ್ರಾಮಪ್ಪನ ಕೊಲೆ ಮಾಡಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.ಕೊಲೆ ಮಾಡಿದ ತಂದೆ – ಮಗನನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಾಮಾಚಾರ ಇತ್ಯಾದಿಗಳಿಗಾಗಿ ಎರಡು ತಲೆ ಹಾವುಗಳಿಗೆ ಅತ್ಯಂತ ಬೇಡಿಕೆ ಇದೆ. ಎರಡು ತಲೆ ಹಾವುಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತವೆ. ಅದೇ ಹಿನ್ನೆಲೆಯಲ್ಲಿ ಕೆಲವರು ಎರಡು ತಲೆ ಹಾವನ್ನು ಹಿಡಿದು ಮಾರೋದನ್ನೇ ದೊಡ್ಡ ಕಾಯಕವಾಗಿಸಿಕೊಂಡಿದ್ದಾರೆ.

- Advertisement -

Related news

error: Content is protected !!