


ಕರಾಚಿ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇಂದು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಈ ಹಿಂಸಾಚಾರದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಮತ್ತು ಅಮೆರಿಕದ ಜಂಟಿ ವಾಯು ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಲಿ ಖಮೇನಿ ಹತರಾದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಈ ಪ್ರತಿಭಟನೆಗಳು ಭುಗಿಲೆದ್ದವು. ಕರಾಚಿಯ ಮೈ ಕೋಲಾಚಿ ರಸ್ತೆಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಆವರಣಕ್ಕೆ ನೂರಾರು ಪ್ರತಿಭಟನಾಕಾರರು ನುಗ್ಗಿ, ಕಿಟಕಿಗಳನ್ನು ಪುಡಿಪುಡಿ ಮಾಡಿ ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು.ಉದ್ರಿಕ್ತ ಜನಸಮೂಹವನ್ನು ಚದುರಿಸಲು ಪೊಲೀಸರು ಮತ್ತು ಅರೆಸೇನಾ ಪಡೆಗಳು ಕಣ್ಣೀರು ಅನಿಲ ಪ್ರಯೋಗಿಸಿದರು ಮತ್ತು ಗುಂಡಿನ ದಾಳಿ ನಡೆಸಿದರು. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಬುಲೆಟ್ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸೇವೆಗಳು ದೃಢಪಡಿಸಿವೆ.
ಕರಾಚಿ ಮಾತ್ರವಲ್ಲದೆ, ಪಾಕಿಸ್ತಾನದ ಲಾಹೋರ್ ಮತ್ತು ಗಿಲ್ಕಿಟ್ ಬಾಲ್ಟಿಸ್ತಾನ್ ಪ್ರದೇಶದ ಸರ್ದುವಿನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಮೇಲೆಯೂ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ ಎಂದು ವರದಿಗಳು ತಿಳಿಸಿವೆ. ಇರಾನ್ ತನ್ನ ನಾಯಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದು, ಇಡೀ ಮಧ್ಯಪ್ರಾಚ್ಯ ಮತ್ತು ನೆರೆಹೊರೆಯ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ ವರದಿ ಮೂಲಕ ತಿಳಿದು ಬಂದಿದೆ.








