




ಧರ್ಮಸ್ಥಳ: ಅರಣ್ಯ ಪ್ರದೇಶಗಳಲ್ಲಿ ಹೆಣಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಭಾರೀ ಚರ್ಚೆಯಾಗುತ್ತದೆ. ಪ್ರಕರಣವನ್ನು ಕೈಗೆತ್ತಿಕೊಂಡ ಎಸ್‌ಐಟಿ ಟೀಮ್, ಇಂಚಿಂಚು ಬಿಡದೆ ತನಿಖೆ ನಡೆಸುತ್ತಿದೆ. 17 ಜಾಗಗಳಲ್ಲಿ ಅಗೆದು-ಬಗೆದು ನೋಡಿದ್ದು, ಈ ಕೇಸ್ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದೆ ಎನ್ನಲಾಗ್ತಿದೆ.
ನೇತ್ರಾವತಿ ನದಿ ತೀರದ ಅರಣ್ಯ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪ ಮಾಡುತ್ತಿರುವ ಅನಾಮಧೇಯನ ಮಾತಿನ ಮೇಲೆಯೇ ಇದೀಗ ಅನುಮಾನ ಶುರುವಾಗಿದೆ ಎನ್ನಲಾಗುತ್ತಿದೆ. ಮಾಸ್ಕ್ ಮ್ಯಾನ್ ತೋರಿಸಿದ 17 ಜಾಗಗಳಲ್ಲಿ ಒಂದು ಸ್ಥಳದಲ್ಲಿ ಬಿಟ್ಟರೆ ಬೇರೆಲ್ಲೂ ಕಳೇಬರ ಸಿಕ್ಕಿಲ್ಲ. ಹೀಗಾಗಿ ಉತ್ಖನನ ಕಾರ್ಯಕ್ಕೆ ಎಸ್‌ಐಟಿ ಟೀಮ್ ಬ್ರೇಕ್ ಹಾಕಿದೆ ಎನ್ನಲಾಗ್ತಿದೆ.
17 ಜಾಗಗಳ ಉತ್ಖನನ ಬೆನ್ನಲ್ಲೇ ಅಸ್ಥಿಪಂಜರ ಶೋಧಕ್ಕೆ ಎಸ್‌ಐಟಿ ಟೀಮ್ ಬ್ರೇಕ್ ಹಾಕಿದ್ದು, ಇಂದು ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಅನಾಮಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬುರುಡೆಯ ಜಾಡು ಹಿಡಿದು ಎಸ್ ಐ ಟಿ ತನಿಖೆ ನಡೆಸಲಿದೆ ಎನ್ನಲಾಗುತ್ತಿದೆ.
ತಲೆ ಬುರಡೆಯನ್ನೇ ತಂದು ಕೋರ್ಟ್ ಮುಂದೆ ಹೇಳಿಕೆ ಕೊಟ್ಟ ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಮುಂದಾಗಿದೆ. ಸದ್ಯ ಉತ್ಖನನಕ್ಕೆ ಬ್ರೇಕ್ ಹಾಕಲು ಎಸ್ ಐ ಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.
ಅಲ್ಲದೇ ಇನ್ನಷ್ಟು ಜಾಗಗಳಲ್ಲಿ ಉತ್ಖನನ ನಡೆಸಲು ಅನಾಮಿಕ ಪಟ್ಟು ಹಿಡಿದಿದ್ದಾನೆ ಎನ್ನಲಾಗ್ತಿದೆ. ಆದ್ರೆ ಎಸ್‌ಐಟಿ ಸದ್ಯಕ್ಕೆ ಶೋಧ ಕಾರ್ಯ ನಡೆಸುವ ಚಿಂತನೆ ನಡೆಸಿಲ್ಲ. ಈಗಾಗಲೇ ಕಲೆ ಹಾಕಿರುವ ದಾಖಲೆ ಆಧಾರದಲ್ಲಿ ತನಿಖೆ ನಡೆಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.








