




ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬೆನ್ನಲ್ಲೇ ಈಗ ಎಲ್ಲರ ಕಣ್ಣು ನೂತನ ಸಚಿವ ಸಂಪುಟ ರಚನೆಯ ಮೇಲೆ ನೆಟ್ಟಿದೆ. ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಗೆ ಎಐಸಿಸಿ ವಲಯದಲ್ಲಿ ಅತ್ಯಂತ ತೀವ್ರ ಸ್ವರೂಪದ ಚರ್ಚೆಗಳು ನಡೆಯುತ್ತಿವೆ. ದೆಹಲಿ ಮೂಲಗಳ ಮಾಹಿತಿ ಪ್ರಕಾರ, ಈ ಬಾರಿಯ ಸಂಪುಟ ರಚನೆಯು ಎರಡು ಪ್ರತ್ಯೇಕ ಹಂತಗಳಲ್ಲಿ ನಡೆಯಲಿದ್ದು, ಪ್ರಾದೇಶಿಕ ಹಾಗೂ ಜಾತಿಸಮೀಕರಣಕ್ಕೆ ಭಾರಿ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರದ ಪ್ರಕಾರ, ಮೊದಲ ಹಂತದ ಸಂಪುಟ ರಚನೆಯು ಜೂನ್ 3 ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭದಂದೇ ನಡೆಯಲಿದೆ. ಅಂದು ಸಿಎಲ್‌ಪಿ ನಾಯಕ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಕೇವಲ 8 ರಿಂದ 10 ಮಂದಿ ಹಿರಿಯ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರಂಭಿಕ ಹಂತದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಆಡಳಿತದ ಅನುಭವವಿರುವ ಹಿರಿಯ ನಾಯಕರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಮುಂಬರುವ ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಮುಗಿದ ಬಳಿಕ ಎರಡನೇ ಹಂತದ ಸಂಪುಟ ವಿಸ್ತರಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು. ಈ ಹಂತದಲ್ಲಿ ಯುವ ಶಾಸಕರಿಗೆ ಹೆಚ್ಚಿನ ಮಣೆ ಹಾಕಲು ಹೈಕಮಾಂಡ್ ನಿರ್ಧರಿಸಿದ್ದು, ಒಟ್ಟಾರೆ ಸಂಪುಟಕ್ಕೆ ನವ ಚೈತನ್ಯ ತುಂಬಲು ‘ಯಂಗ್ ಕ್ಯಾಬಿನೆಟ್’ ಸೂತ್ರವನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ತಮ್ಮ ಕಡೆಯಿಂದ 10 ಜನ ಆಪ್ತ ಶಾಸಕರ ಮೊದಲ ಪಟ್ಟಿಯನ್ನು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಕೈಗಿಟ್ಟಿದ್ದಾರೆ. ಈ ಪಟ್ಟಿಯಲ್ಲಿ ಡಿಕೆಶಿ ಅತ್ಯಂತ ಚಾಣಾಕ್ಷ ಸಾಮಾಜಿಕ ಸಮೀಕರಣದ ಸೂತ್ರ ಹೆಣೆದಿದ್ದಾರೆ. ಒಕ್ಕಲಿಗ 4, ಪರಿಶಿಷ್ಟ ಜಾತಿ (SC) 2 ಸ್ಥಾನ, ಮುಸ್ಲಿಂ ಸಮುದಾಯ 2 ಸ್ಥಾನ, ಮಹಿಳೆಯರಿಗೆ 2 ಸ್ಥಾನ ನೀಡುವ ಪ್ಲ್ಯಾನ್ ಮಾಡಿದ್ದಾರೆ. 65 ವರ್ಷದೊಳಗಿನ ಉತ್ಸಾಹಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕು ಎಂಬ ಬಲವಾದ ವಾದವನ್ನು ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ಮಂಡಿಸಿದ್ದಾರೆ ಎನ್ನಲಾಗಿದೆ.
ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಅವರು ತಮ್ಮ ಬಣದ ನಾಯಕರು ಹಾಗೂ ಹಿರಿಯ ಶಾಸಕರನ್ನು ಒಳಗೊಂಡ 15 ರಿಂದ 20 ಮಂದಿಯ ಪ್ರತ್ಯೇಕ ಪಟ್ಟಿಯನ್ನು ಶೀಘ್ರದಲ್ಲೇ ಹೈಕಮಾಂಡ್‌ಗೆ ನೀಡಲಿದ್ದಾರೆ. ಉಭಯ ನಾಯಕರ ಪಟ್ಟಿಗಳನ್ನು ಪರಿಶೀಲಿಸಿದ ಬಳಿಕ, ಉಳಿದ ಉಸ್ತುವಾರಿ ಹಾಗೂ ಪ್ರಮುಖ ಖಾತೆಗಳ ಸ್ಥಾನಗಳಿಗೆ ಹೈಕಮಾಂಡ್ ನಾಯಕರೇ ಅಂತಿಮವಾಗಿ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ ಎಂದು ಎಐಸಿಸಿ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.








