


ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೆಂಪುಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಸತತ ಎರಡನೇ ವರ್ಷವೂ ಗೈರಾಗಿದ್ದಾರೆ.
ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
2024ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕ್ಯಾಬಿನೆಟ್ ಸಚಿವರ ದರ್ಜೆ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಸಂಪ್ರದಾಯ ಮತ್ತು ಶಿಷ್ಟಾಚಾರವನ್ನು ಬದಿಗೊತ್ತಿ ಹಿಂದಿನ ಸಾಲಿನಲ್ಲಿ ಆಸನ ನಿಗದಿಪಡಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಕಾರ್ಯಕ್ರಮವನ್ನು ಆಯೋಜಿಸಿದ್ದ ರಕ್ಷಣಾ ಸಚಿವಾಲಯ, ಒಲಿಂಪಿಕ್ಸ್ ಕ್ರೀಡಾಪಟಗಳಿಗೆ ಆವರಣದಲ್ಲಿ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಲು ಈ ಬದಲಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಕಾಂಗ್ರೆಸ್ ಸಂಸದರಿಗೆ ಈ ರೀತಿ ಆಸನ ನೀಡಿರುವುದು ಜನತೆಗೆ ಎಸಗಿದ ಅಪಮಾನ ಎಂದು ವಿರೋಧ ಪಕ್ಷಗಳು ಖಂಡಿಸಿದ್ದವು ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.








