ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದ ಹಲವು ದಿನಗಳಿಂದ ಭೀಕರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಕುಶಾಲನಗರದ ಕುವೆಂಪು ಬಡಾವಣೆ ಜಲಾವೃತ
ಸತತ ಮಳೆಯಿಂದಾಗಿ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಕುವೆಂಪು ಬಡಾವಣೆ ಸಂಪೂರ್ಣ ಮುಳುಗಡೆಯಾಗಿದೆ.ರಸ್ತೆಗಳಲ್ಲಿ ನೀರು ತುಂಬಿದ್ದು, ಹಳ್ಳದಂತೆ ಹರಿಯುತ್ತಿದೆ. ಮನೆಗಳಿಗೂ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಹಾರಂಗಿ ಜಲಾಶಯದಿಂದ 11,811 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕುಶಾಲನಗರದ ಕೆಲ ಬಡಾವಣೆಗಳು ಜಲಾವೃತಗೊಂಡಿದೆ. ಮಡಿಕೇರಿ-ವಿರಾಜಪೇಟೆಯ ಕದನೂರು ರಸ್ತೆಯಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತ:
ಮತ್ತೊಂದುಕಡೆ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಅಪಾಯದ ಭೀತಿಯಲ್ಲಿರುವ ಮನೆಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಗುಡ್ಡ ಕುಸಿತ:
ಮಡಿಕೇರಿ-ಮಂಗಳೂರು ಭಾಗದಲ್ಲಿ ಗುಡ್ಡ ಕುಸಿದಿದೆ. ಹಲವೆಡೆ ಗುಡ್ಡದಿಂದ ಮಣ್ಣು ಕುಸಿದ ಪರಿಣಾಮ ಮಣ್ಣು ತೆರವು ಮಾಡುವವರೆಗ ಭಾರೀ ಗಾತ್ರದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.