


ಗದಗ : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ 14ನೇ ದಿನಕ್ಕೆ ಕಾಲಿಟ್ಟಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಇದುವರೆಗೂ 45ಕ್ಕೂ ಹೆಚ್ಚು ವಿಶೇಷ ಪ್ರಾಚ್ಯಾವಶೇಷ ವಸ್ತುಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆ ನಿರ್ದೇಶಕ ಶೇಜೇಶ್ವರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
ಲಕ್ಕುಂಡಿಯ ಉತ್ಖನನದ ವೇಳೆ ಸಿಕ್ಕ ಪ್ರಾಚ್ಯವಸ್ತುಗಳ ಕುರಿತು ಮಾತನಾಡಿದ ಐತಿಹಾಸಿಕ ತಜ್ಞ ಷಡಕ್ಷರಯ್ಯಾ ಅವರು ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನದಲ್ಲಿ ಚಿನ್ನದ ನಾಣ್ಯಗಳು, ಪ್ರಾಚ್ಯಾವಶೇಷ ಮತ್ತು ನಾಗ ಮೂರ್ತಿಗಳು ಪತ್ತೆಯಾಗಿದ್ದು, ಲಕ್ಕುಂಡಿಯ ಸಂಪೂರ್ಣ ಐತಿಹಾಸಿಕ ವಸ್ತುಗಳನ್ನು ಹೊರತೆಗೆಯಲು ಗ್ರಾಮವನ್ನು ಸ್ಥಳಾಂತರಿಸಿ ಸಮಗ್ರ ಉತ್ಖನನ ಮಾಡಬೇಕು. ಕೆಲವು ಶಿಲೆ, ಧಾರ್ಮಿಕ ವಸ್ತುಗಳು ನೆಲದ ಮೂರು-ನಾಲ್ಕು ಅಡಿ ಕೆಳಗೆ ಸಿಕ್ಕಿದ್ದು, ನಿಧಿ ಹೇಗೆ ಸಿಕ್ಕಿದೆ ಎಂಬ ಬಗ್ಗೆ ಅನುಮಾನಗಳು ಮೂಡಿವೆ ಎಂದಿದ್ದಾರೆ.
ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಿಂದ ಶಾಲಾ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿ, ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳ ಮಕ್ಕಳಿಗೆ ಧೂಳಿನಿಂದ ಕೆಮ್ಮು-ನೆಗಡಿ, ವಾಂತಿ ಮತ್ತು ಜ್ವರದ ಸಮಸ್ಯೆಗಳು ಕಾಣಿಸಿಕೊಂಡು, ನರಳಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮವಾಗಿ ಶಾಲೆ ಸುತ್ತ ಮತ್ತು ಉತ್ಪನನ ಆವರಣದಲ್ಲಿ ಟ್ರಾಕ್ಟರ್ ಮೂಲಕ ನೀರು ಹರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.








