


ಬೆಂಗಳೂರು: ಆಸ್ಪತ್ರೆಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್ನಲ್ಲಿ ಪಾರದರ್ಶಕತೆ ತರಲು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಆಸ್ಪತ್ರೆಗಳು ರೋಗಿಗಳಿಗೆ ನೀಡುವ ಬಿಲ್ನಲ್ಲಿ ಔಷಧಗಳ ಖರೀದಿ ಬೆಲೆ ಹಾಗೂ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ(ಎಂಆರ್ಪಿ) ಎರಡನ್ನೂ ನಮೂದಿಸುವುದು ಕಡ್ಡಾಯವಾಗಲಿದ್ದು, ಹೊಸ ನಿಯಮ ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಟ್ರಸ್ಟ್ ಆಸ್ಪತ್ರೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಆಸ್ಪತ್ರೆಗಳಲ್ಲಿ ಔಷಧಗಳ ಬೆಲೆಗೆ ಸಂಬಂಧಿಸಿದಂತೆ ಪಾರದರ್ಶಕತೆ ಹೆಚ್ಚಿಸುವುದು, ರೋಗಿಗಳಿಗೆ ಆಗುವ ಅನ್ಯಾಯ ತಡೆಯುವುದು ಮತ್ತು ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಸ್ಪಷ್ಟತೆ ತರುವುದು ಈ ಕ್ರಮದ ಉದ್ದೇಶವಾಗಿದೆ.
ಹೊಸ ನಿಯಮದ ಪ್ರಕಾರ, ಆಸ್ಪತ್ರೆಗಳು ಔಷಧಗಳ ಖರೀದಿ ಬೆಲೆ(ಲ್ಯಾಂಡಿಂಗ್ ಅಥವಾ ಬೇಸ್ ಪ್ರೈಸ್) ಮತ್ತು ಎಂಆರ್ಪಿ ಎರಡನ್ನೂ ಬಿಲ್ನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಅಲ್ಲದೆ, ರೋಗಿಗೆ ವಿಧಿಸುವ ದರವು ಔಷಧದ ಎಂಆರ್ಪಿಯನ್ನು ಮೀರಬಾರದು ಎಂದು ಎಫ್ಡಿಎ ಸೂಚಿಸಿದೆ. ಔಷಧಗಳ ಬಿಲ್ನಲ್ಲಿ ಅವುಗಳ ಹೆಸರು, ಬ್ರ್ಯಾಂಡ್, ಬ್ಯಾಚ್ ಸಂಖ್ಯೆ, ತಯಾರಿಕೆ ದಿನಾಂಕ ಮತ್ತು ಅವಧಿ ಮುಕ್ತಾಯದ ದಿನಾಂಕವನ್ನೂ ನಮೂದಿಸಬೇಕು. ಇದರಿಂದ ರೋಗಿಗಳು ತಾವು ಖರೀದಿಸುತ್ತಿರುವ ಔಷಧದ ವಿವರ ಹಾಗೂ ಅದಕ್ಕೆ ವಿಧಿಸಲಾಗಿರುವ ದರವನ್ನು ಪರಿಶೀಲಿಸಲು ಅನುಕೂಲವಾಗಲಿದೆ.
ಆಸ್ಪತ್ರೆಗಳು ತಮ್ಮ ವೆಬ್ಸೈಟ್ನಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ದರ ಪಾರದರ್ಶಕತೆ ನೀತಿಯ ವಿವರಗಳನ್ನು ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ. ಔಷಧ ಖರೀದಿಗೆ ಸಂಬಂಧಿಸಿದ ಇನ್ವಾಯ್ಸ್ಗಳು, ಖರೀದಿ ದರಗಳು ಮತ್ತು ಬಿಲ್ಲಿಂಗ್ ದಾಖಲೆಗಳನ್ನು ಕನಿಷ್ಠ ಮೂರು ವರ್ಷಗಳ ಕಾಲ ಸಂರಕ್ಷಿಸಬೇಕಾಗುತ್ತದೆ. ಇದಲ್ಲದೆ, ಎಫ್ಡಿಎ ಅಧಿಕಾರಿಗಳು ಆಸ್ಪತ್ರೆಗಳ ಬಿಲ್ಗಳು ಮತ್ತು ಖರೀದಿ ದಾಖಲೆಗಳನ್ನು ಪರಿಶೀಲಿಸಲು ಅವಕಾಶವಿರಲಿದೆ. ನಿಯಮಗಳನ್ನು ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಆಸ್ಪತ್ರೆಗಳಲ್ಲಿ ಔಷಧಗಳ ಬೆಲೆ ಮತ್ತು ಬಿಲ್ಲಿಂಗ್ಗೆ ಸಂಬಂಧಿಸಿದ ಗೊಂದಲಗಳನ್ನು ಕಡಿಮೆ ಮಾಡಲು ಈ ನಿಯಮ ನೆರವಾಗುವ ನಿರೀಕ್ಷೆಯಿದೆ. ಔಷಧವನ್ನು ಆಸ್ಪತ್ರೆ ಎಷ್ಟು ಬೆಲೆಗೆ ಖರೀದಿಸಿದೆ ಮತ್ತು ರೋಗಿಗೆ ಎಷ್ಟು ದರ ವಿಧಿಸಲಾಗಿದೆ ಎಂಬ ಮಾಹಿತಿ ಬಿಲ್ನಲ್ಲೇ ಲಭ್ಯವಾಗುವುದರಿಂದ ಗ್ರಾಹಕರು ತಮ್ಮ ಬಿಲ್ ಪರಿಶೀಲಿಸಲು ಸಾಧ್ಯವಾಗಲಿದೆ.
ನವೆಂಬರ್ 1ರಿಂದ ನಿಯಮ ಜಾರಿಗೆ ಬಂದ ಬಳಿಕ ಆಸ್ಪತ್ರೆಗಳ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮೂಡಿಸುವುದು ಮತ್ತು ರೋಗಿಗಳ ಹಿತಾಸಕ್ತಿ ಕಾಪಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








