ಬೆಂಗಳೂರು: ಇಂಧನ ಬೆಲೆ ಏರಿಕೆ, ಇ-ವೇ ಬಿಲ್ , ಹಸಿರು ತೆರಿಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತರ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಈ ಬಂದ್ಗೆ ರಾಜ್ಯದಲ್ಲಿ ಕೂಡ ಬೆಂಬಲ ವ್ಯಕ್ತವಾಗಿದ್ದು, ಇಂದು ಲಾರಿಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ. ರಾಷ್ಟ್ರೀಯ ಟ್ರೇಡರ್ಸ್ ಯೂನಿಯನ್ ಕರೆ ನೀಡಿರುವ ಬಂದ್ಗೆ ರಾಜ್ಯ ಲಾರಿ ಮಾಲೀಕರ ಸಂಘ ಕೂಡ ಬೆಂಬಲ ನೀಡಿದೆ ಎಂದು ಸಂಘದ ಅಧ್ಯಕ್ಷ ಷಣ್ಮುಗಪ್ಪ ಈಗಾಗಲೇ ತಿಳಿಸಿದ್ದಾರೆ.

ಗುತ್ತಿಗೆ ಅವಧಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿರುವ ಟೋಲ್ಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಮುಷ್ಕರದ ಹಿನ್ನಲೆ ಇಂದು 20 ಲಕ್ಷಕ್ಕೂ ಹೆಚ್ಚು ಲಾರಿಗಳು ರಸ್ತೆಗೆ ಇಳಿಯುವುದಿಲ್ಲ. ಇದರಿಂದ ದೈನಂದಿನ ಸರಕು-ಸಾಗಣೆ ಸಾಗಾಟದ ಮೇಲೆ ಪರಿಣಾಮ ಬೀರಲಿದೆ.

ಇಂಧನ ಹೆಚ್ಚಳದಿಂದಾಗಿ ಒಂದು ಕಿಲೋಮೀಟರ್ ಗೆ ಲಾರಿ ಓಡಿಸಲು ಮಾಲೀಕರಿಗೆ 36 ರೂ. ವೆಚ್ಚವಾಗುತ್ತಿದೆ. ರಾಜ್ಯದಿಂದ 40 ಸಾವಿರ ಲಾರಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಹೊರ ರಾಜ್ಯದಲ್ಲಿ ಡಿಸೇಲ್ ಕಡಿಮೆ ಇದೆ. ಕಡಿಮೆ ಇರುವ ರಾಜ್ಯಗಳಿಂದ ಮಾಲೀಕರು ಡಿಸೇಲ್ ಹಾಕಿಸಿಕೊಂಡು ಬರುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಹಿನ್ನಲೆ ಪ್ರತಿ ಲೀಟರ್ ಡಿಸೇಲ್ ಗೆ 3 ರೂ ಸೆಸ್ ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ.










