Wednesday, April 24, 2024
spot_imgspot_img
spot_imgspot_img

ಎಂ ಫ್ರೆಂಡ್ಸ್ ನ ಕಾರುಣ್ಯ ಸೇವೆಗೆ ಒಂದು ಸಾವಿರ ದಿನದ ಸಂಭ್ರಮ.ಒಂದು ಸಾವಿರ ದಿನಗಳಿಂದ ಉಚಿತ ಆಹಾರ ವಿತರಿಸುತ್ತಿರುವುದು ಶ್ಲಾಘನೀಯ: ಜಿಲ್ಲಾಧಿಕಾರಿ

- Advertisement -G L Acharya panikkar
- Advertisement -

ಮಂಗಳೂರು: ಸರಕಾರವು ಜನರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಪ್ರಕಟಿಸಿದರೂ ಕೂಡ ಅವುಗಳ ಅನುಷ್ಠಾನದ ಸಂದರ್ಭ ಕೆಲವು ಇತಿಮಿತಿಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಸಂಘ ಸಂಸ್ಥೆಗಳಿಗೆ ಈ ಎಲ್ಲಾ ಇತಿಮಿತಿಗಳನ್ನು ಮೀರಿಯೂ ಸಮಾಜಮುಖಿ ಸೇವೆಗಳನ್ನು ಸಲ್ಲಿಸಲು ಮುಕ್ತ ಅವಕಾಶವಿದೆ. ಸಮಾನ ಮನಸ್ಕರು ಸೇರಿಕೊಂಡು ಕಾರ್ಯಾಚರಿಸುವ ‘ಎಂ.ಫ್ರೆಂಡ್ಸ್’ ಸಂಘಟನೆಯು ವೆನ್ಲಾಕ್ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವರಿಗೆ ದಿನನಿತ್ಯ ‘ಅನ್ನದಾನ’ದಂತಹ ಕಾರುಣ್ಯ ಸೇವೆಯ ಮೂಲಕ ಈ ಅವಕಾಶವನ್ನು ಬಳಸಿಕೊಂಡಿವೆ. ಇಂತಹ ಸೇವೆಯಲ್ಲಿ ಸಾಮುದಾಯಿಕ ಸಹಭಾಗಿತ್ವವು ಅತ್ಯಗತ್ಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ನಗರದ ವೆನ್ಲಾಕ್ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವರಿಗೆ ದಿನನಿತ್ಯ ‘ಅನ್ನದಾನ’ಗೈಯ್ಯುವ ಕಾರುಣ್ಯ ಸೇವೆಯು ಒಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಐಎಂಎ ಹಾಲ್‌ನಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಒಬ್ಬ ವೈದ್ಯನಾಗಿ, ಸರಕಾರಿ ಅಧಿಕಾರಿಯಾಗಿ ರೋಗಿಗಳು ಮಾತ್ರವಲ್ಲ ಅವರನ್ನು ಉಪಚರಿಸುವವರು ಎದುರಿಸುವ ವಸತಿ, ಆಹಾರದ ಸಮಸ್ಯೆಯ ಅರಿವು ನನಗಿದೆ. ಇದನ್ನು ಎಂ.ಫ್ರೆಂಡ್ಸ್‌ನಂತಹ ಸಂಘಟನೆಯು ನಿರಂತರವಾಗಿ ಒಂದು ಸಾವಿರ ದಿನಗಳಿಂದ ಉಚಿತ ಆಹಾರ ವಿತರಿಸುತ್ತಿರುವುದು ಶ್ಲಾಘನೀಯ.ಮುಂದಿನ ದಿನಗಳಲ್ಲಿ ರೋಗಿಗಳ ಉಪಚಾರದಲ್ಲಿ ತೊಡಗಿಸಿಕೊಳ್ಳುವವರಿಗೆ ಜಿಲ್ಲಾಡಳಿತವು ‘ಧರ್ಮಛತ್ರ ’ ನಿರ್ಮಿಸುವ ಬಗ್ಗೆ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಪ್ರಕಟಿಸಿದರು.

ಎಂ.ಫ್ರೆಂಡ್ಸ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶ್ಯಾನ್‌ಭೋಗ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಹಾಜಿ ಶರೀಫ್ ವೈಟ್‌ಸ್ಟೋನ್, ಐಎಂಎ ಅಧ್ಯಕ್ಷ ಡಾ.ಸಿ.ಪಿ.ಹಬೀಬುರ್ರಹ್ಮಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭ ನಿರಂತರವಾಗಿ ‘ಒಂದು ಸಾವಿರ ದಿನ’ ವೆನ್ಲಾಕ್ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವರಿಗೆ ಆಹಾರದ ವ್ಯವಸ್ಥೆ ಕಲ್ಪಿಸುತ್ತಿರುವ ಅಶ್ಫಾಕ್ ಮತ್ತು ಸೌಹಾನ್ ಎಸ್‌ಕೆ ಅವರನ್ನು ಗೌರವಿಸಲಾಯಿತು.

ಎಂ.ಫ್ರೆಂಡ್ಸ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಇರ್ಶಾದ್ ಬೈರಿಕಟ್ಟೆ ಕಿರಾಅತ್ ಪಠಿಸಿದರು. ನ್ಯಾಯವಾದಿ ಅಬೂಬಕರ್ ವಂದಿಸಿದರು. ಪತ್ರಕರ್ತ ಆರೀಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!