


ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿನ ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ರವಿವಾರ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಬಜೆಟ್ ಮೇಲೆ ಉದ್ಯೋಗ ವಲಯ ಹಾಗೂ ಮಧ್ಯಮ ವರ್ಗದ ತೆರಿಗೆ ಪಾವತಿದಾರರು ಹೊಸ ಹಣಕಾಸು ವರ್ಷದಲ್ಲಿ ತೆರಿಗೆ ವಿನಾಯ್ತಿಯ ನಿರೀಕ್ಷೆಯಲ್ಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದ್ದು, ಈ ಬಜೆಟ್ ಮೂಲಕ ನಿರ್ಮಲಾ ಸೀತಾರಾಮನ್ ಅವರು ಸತತ ಒಂಭತ್ತು ಕೇಂದ್ರ ಬಜೆಟ್ ಮಂಡಿಸಿದ ಭಾರತದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಈ ವರ್ಷದ ಬಜೆಟ್‌ನಲ್ಲಿ ಸರಳ ಆದಾಯ ತೆರಿಗೆ ವ್ಯವಸ್ಥೆ, ಜಿಎಸ್‌ಟಿ ತರ್ಕಬದ್ಧಗೊಳಿಸುವಿಕೆ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ನಾವೀನ್ಯತೆಗೆ ನೀತಿ ಬೆಂಬಲ ದೊರೆಯುವ ನಿರೀಕ್ಷೆಯಿದೆ. ಜೊತೆಗೆ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪ್ರಗತಿ, ಭಾರತೀಯ ಸರಕುಗಳ ಮೇಲೆ ವಿಧಿಸಲಾಗಿರುವ ಹೆಚ್ಚಿನ ಆಮದು ಸುಂಕಗಳ ವಿಚಾರ ಹಾಗೂ ಭಾರತ-ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ ಚರ್ಚೆಗಳು ಮಹತ್ವ ಪಡೆದುಕೊಳ್ಳಲಿವೆ. ಯುರೋಪಿಯನ್ ವೈನ್ ಮತ್ತು ಪ್ರಯಾಣಿಕ ವಾಹನಗಳ ಮೇಲಿನ ಸುಂಕ ಕಡಿತದ ಸಾಧ್ಯತೆಯೂ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ಬೆಲೆ ಏರಿಳಿತ ಕಂಡಿರುವ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳ ಕುರಿತು ನೀತಿ ಸೂಚನೆಗಳು ಬಜೆಟ್‌ನಲ್ಲಿಇರಬಹುದೆಂಬ ನಿರೀಕ್ಷೆಯ ಜೊತೆಗೆ, ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಮತ್ತಷ್ಟು ಬಲ ಸಿಗುವ ಸಾಧ್ಯತೆಯೂ ಇದೆ.
ಅಭಿವೃದ್ಧಿಶೀಲ ಆರ್ಥಿಕತೆಗೆ ಪ್ರಬಲ ಉಳಿತಾಯ ಸಂಸ್ಕೃತ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆ ತೆರಿಗೆಯನ್ನು ಸರಳೀಕರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಧೀರ್ಘಾವಧಿ ಉಳಿತಾಯ ಯೋಜನೆಗಳಾದ ಇಪಿಎಫ್, ಎನ್‌ಪಿಎಸ್, ಪಿಪಿಫ್‌ಗಳಂಥ ಧೀರ್ಘಾವಧಿ ಯೋಜನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.








