ಮಂಗಳೂರು : ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸಿಕ್ಕಿದ ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರದ ಗಟ್ಟಿಯನ್ನು ಹಿಂತಿರುಗಿಸಿ ಮಂಗಳೂರಿನ ಯುವಕನೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಪ್ರಭಾಕರ್ ಪ್ರಭು ಎಂಬುವರು ಮಂಗಳೂರಿನ ಅಡ್ಯಾರ್ನ ಸಹ್ಯಾದ್ರಿ ಕಾಲೇಜಿನ ಬಳಿ ವಾಹನದಲ್ಲಿ ಬರುತ್ತಿದ್ದಾಗ ಒಂದು ಪರ್ಸ್ ಸಿಕ್ಕಿದ್ದು, ಅದರಲ್ಲಿ ಅಂದಾಜು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಇತ್ತು. ಬಂಗಾರದ ಗಟ್ಟಿ ಇರುವ ಪರ್ಸ್ ಸಿಕ್ಕಿರುವ ಬಗ್ಗೆ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ಬಳಿ ತಿಳಿಸಿದ್ದರು.

ಶಾಸಕ ವೇದವ್ಯಾಸ ಕಾಮತ್ ಅವರ ಸಲಹೆಯಂತೆ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ರವೀಂದ್ರ ನಿಕ್ಕಂ ಅವರಲ್ಲಿ ವಿಚಾರ ತಿಳಿಸಿದ್ದು, ಅವರು ತಮ್ಮ ಆಪ್ತರ ವಲಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅದು ಅಡ್ಯಾರ್ ಬಳಿಯ ನಿವಾಸಿ ಕೃಷ್ಣ ಆಚಾರ್ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಬಂಗಾರದ ಗಟ್ಟಿಯನ್ನು ಕರಗಿಸಿ ಅದರಿಂದ ಆಭರಣ ಮಾಡುವ ಕೃಷ್ಣ ಆಚಾರ್ ಅವರು ಹಿಂದಿನ ದಿನ ಬಂಗಾರದ ಗಟ್ಟಿಯನ್ನು ಕಳೆದುಕೊಂಡಿದ್ದರು.
ಇಂದು ಮಂಗಳೂರಿನ ಜೋಡು ಮಠ ರಸ್ತೆಯಲ್ಲಿರುವ ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್ ಅವರ ನೇತೃತ್ವದಲ್ಲಿ ರವೀಂದ್ರ ನಿಕ್ಕಂ ಅವರ ಉಪಸ್ಥಿತಿಯಲ್ಲಿ ಪ್ರಭಾಕರ್ ಪ್ರಭು ಅವರು ಕೃಷ್ಣ ಆಚಾರ್ ಅವರಿಗೆ ಬಂಗಾರವನ್ನು ಹಸ್ತಾಂತರಿಸಿದರು.









