Sunday, October 6, 2024
spot_imgspot_img
spot_imgspot_img

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ನೇತೃತ್ವದಲ್ಲಿ ಪತ್ರಿಕಾ ದಿನಾಚರಣೆ

- Advertisement -
- Advertisement -

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ನೇತೃತ್ವದಲ್ಲಿ ವಿವೇಕಾನಂದ ಕಾಲೇಜು(ಸ್ವಾಯತ್ತ) ಪುತ್ತೂರು ಹಾಗೂ ಪತ್ರಿಕೋದ್ಯಮ ವಿಭಾಗ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ- ಉಪನ್ಯಾಸ-ಸನ್ಮಾನ ಸಮಾರಂಭ ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಸತ್ಯದ ವರದಿಗಳನ್ನು ಪ್ರಕಟಿಸಿದ ಪತ್ರಕರ್ತರು ಹುತಾತ್ಮರಾದ ಘಟನೆಗಳು ನಡೆದಿದೆ. ಸುಳ್ಳು ಸುದ್ದಿಗಳನ್ನು ಹಾಕಿದಾಗ ಸಮಾಜದ ಹಾಗೂ ಕುಟುಂಬದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಜವಾಬ್ದಾರಿಯುತ ಮಾಧ್ಯಮದಿಂದ ಸಮಾಜದ ಹಾಗೂ ರಾಜಕೀಯ ಬದಲಾವಣೆ ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ಮೂರು ಅಂಗಗಳಿದ್ದು ಇವು ಮೂರು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅವುಗಳನ್ನು ಎಚ್ಚರಿಸುವ ನಾಲ್ಕನೇ ಅಂಗವಾಗಿ ಪತ್ರಿಕಾಂಗ ಕಾರ್ಯ ನಿರ್ವಹಿಸುತ್ತದೆ. ಪೆನ್ನು ಕತ್ತಿಗಿಂತ ಶಕ್ತಿಶಾಲಿಯಾಗಿದೆ. ಆದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಾರದು. ಪತ್ರಕರ್ತರು ಎಥಿಕ್ಸ್‌ನೊಂದಿಗೆ ಜವಾಬ್ದಾರಿ ವಹಿಸಿಕೊಂಡು ಕರ್ತವ್ಯ ನಿರ್ವಹಿಸುವವರಾಗಬೇಕು ಎಂದು ಹೇಳಿದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಬಾಲಗಂಗಾಧರ್ ತಿಲಕ್, ಭಗತ್ ಸಿಂಗ್‌ರವರೂ ಆ ಕಾಲದಲ್ಲಿ ಸ್ವಾತಂತ್ರ್ಯದ ಹೋರಾಟದೊಂದಿಗೆ ಪತ್ರಕರ್ತರಾಗಿ ದುಡಿದವರಾಗಿದ್ದಾರೆ ಎಂಡು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮಾತನಾಡಿ, ವರದಿಗಾರಿಕೆಗೆ ಸಂಬಂಧಪಟ್ಟಂತೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನೆರವು ನೀಡಲು ಸುದ್ದಿ ಬಿಡುಗಡೆ, ಕಹಳೆ, ವಿಟಿವಿ ಸಂಸ್ಥೆ ಸದಾ ಸಿದ್ಧವಿದೆ ಎಂದು ತಿಳಿಸಿದರು. ನಮ್ಮ ಯೂನಿಯನ್‌ ಮೂಲಕ ಹಲವು ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ ಅವರು ನಮ್ಮ ಸಂಘದಲ್ಲಿ ವಿವಿಧ ಪತ್ರಿಕೆ, ಟಿ.ವಿ. ಮತ್ತು ವೆಬ್ ಮಾಧ್ಯಮದ ವರದಿಗಾರರು ಸದಸ್ಯರಾಗಿದ್ದಾರೆ. ಈ ಸದಸ್ಯರಿಗೆ ಕಾರ್ಯ ನಿರ್ವಹಿಸಲು ಸ್ಥಳದ ಅವಶ್ಯಕತೆ ಇದೆ. ಹಾಗಾಗಿ ಪುತ್ತೂರು ಪತ್ರಿಕಾ ಭವನದಲ್ಲಿ ನಮ್ಮ ಯೂನಿಯನ್ ಸದಸ್ಯರಿಗೆ ಮಾತ್ರವಲ್ಲದೆ ಎಲ್ಲಾ ಪತ್ರಕರ್ತರ ಸಂಘದವರಿಗೂ ಸಮಾನ ಅವಕಾಶ ಸಿಗುವಂತಾಗಬೇಕಿದೆ ಎಂದರು. ನಮ್ಮ ಸದಸ್ಯರಿಗೆ ಸರಕಾರದ ಸವಲತ್ತು ಮತ್ತು ಇನ್ಸೂರೆನ್ಸ್ ವ್ಯವಸ್ಥೆ ಸಿಗುವಂತೆ ಮಾಡಲು ಪ್ರಯತ್ನ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಗಾರಗಳನ್ನು ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.

ದ.ಕ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಮಾತನಾಡಿ ನಕಾರಾತ್ಮಕ ಲೇಖನಗಳನ್ನು ಓದುಗರು ಓದುವುದು ಕಡಿಮೆ ಮಾಡಿದಾಗ ಮತ್ತು ಸಕರಾತ್ಮಕ ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ ಎಂದರು. ಪುತ್ತೂರು ವ್ಯಾಪ್ತಿಗೆ ಸಂಬಂಧಪಟ್ಟ ಹಾಗೆ ತುಳುವಿನಲ್ಲಿ ಒಳ್ಳೆಯ ಡಾಕ್ಯುಮೆಂಟರಿ ಮಾಡುವವರಿಗೆ, ಪುಸ್ತಕ ಪ್ರಕಟಿಸುವವರಿಗೆ ತುಳು ಸಾಹಿತ್ಯ ಅಕಾಡೆಮಿ ಫೆಲೋಶಿಪ್ ನಗದು ನೀಡುತ್ತದೆ ಎಂದು ಹೇಳಿದ ಅವರು ಪತ್ರಿಕೋದ್ಯಮದ ಉಗಮ, ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಗೌರವ ಸಲಹೆಗಾರರಾದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪ್ರೊ.ವಿ.ಬಿ. ಅರ್ತಿಕಜೆಯವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಇತಿಹಾಸ ಪ್ರಾಧ್ಯಾಪಕನಾಗಿರುವ ನಾನು ಪತ್ರಿಕೋದ್ಯಮದಲ್ಲಿ ಕಳೆದ ೪೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಪತ್ರಕರ್ತನಾಗಿ ವೃತ್ತಿಯಿಂದ ರಿಟೈರ್ಡ್ ಆದರೂ ಪ್ರವೃತ್ತಿಯಿಂದ ರಿಟೈರ್ಡ್ ಆಗದ ಹಾಗೆ ಸೇವೆ ನೀಡುತ್ತಿದ್ದೇನೆ ಎಂದರು. ಪುತ್ತೂರಿನ ಪತ್ರಕರ್ತರ ಸಂಘಕ್ಕೆ ನಿಜಕ್ಕೂ ಜೀವ ಕೊಟ್ಟವರು ಸುದ್ದಿ ಬಿಡುಗಡೆ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರು. ದಶಕಗಳ ಹಿಂದೆಯೇ ಶಿವಾನಂದರು ಪುತ್ತೂರಿನ ಪತ್ರಕರ್ತರ ಸಂಘದ ಒಡಬಾಡಿ ಆಗಿದ್ದರು ಎಂದು ಹೇಳಿದ ಅರ್ತಿಕಜೆ ಅವರು ವರದಿಗಾರರು ಮಾಡುವ ಲೇಖನ, ವರದಿಗಳು ಓದುಗರ ಮನ ಮುಟ್ಟಬೇಕಾಗಿದೆ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಪ್ರೊ.ವಿ.ಬಿ ಆರ್ತಿಕಜೆರವರನ್ನು ಸನ್ಮಾನಿಸಿ ಮಾತನಾಡಿ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕಳೆದ ೪೦ ವರ್ಷಗಳಿಂದ ಬರೆಯುತ್ತಿದ್ದೇನೆ. ಸನ್ಮಾನಿತ ಪ್ರೊ.ಅರ್ತಿಕಜೆರವರು ಕೂಡ ಪತ್ರಿಕಾ ಜೀವನದಲ್ಲಿ ೪೦ ವರ್ಷದ ಅನುಭವವನ್ನು ಹೊಂದಿರುವುದು ಕಾಕತಾಳೀಯ. ಓರ್ವ ವೈದ್ಯನಾಗಿದ್ದ ನಾನು ಭ್ರಷ್ಟಾಚಾರದ ವಿರುದ್ಧ ೪೦ ವರ್ಷದ ಹಿಂದೆಯೇ ಹೋರಾಟ ನಡೆಸಿ ಪತ್ರಿಕೆ ಆರಂಭಿಸಿ ಈಗಲೂ ಹೋರಾಟ ಮಾಡುತ್ತಿದ್ದೇನೆ ಎಂದರು. ಸಮಾಜದಲ್ಲಿ ಎಲ್ಲರಿಗೂ ಒಂದು ದಿನಾಚರಣೆ ಇದ್ದ ಹಾಗೆ ಆಗಸ್ಟ್ ೧೫ರ ಸ್ವಾತಂತ್ರೋತ್ಸವ ದಿನದಂದು ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಆಚರಣೆ ಮಾಡಬೇಕು ಎನ್ನುವ ಘೋಷಣೆ ಹೊರಡಿಸಬೇಕು ಎಂದು ಹೇಳಿದ ಡಾ. ಶಿವಾನಂದ ಅವರು ವೇದಿಕೆಯಲ್ಲಿದ್ದ ಅತಿಥಿಗಳಿಗೆ ಲಂಚ, ಭ್ರಷ್ಟಾಚಾರದ ವಿರುದ್ಧದ ಜನಜಾಗೃತಿಯ ಫಲಕವನ್ನು ನೀಡಿದರು‌. ಮಳೆ ಕೊಯ್ಲು ಕುರಿತು ಜನಜಾಗೃತಿ ಮೂಡಿಸುತ್ತಿರುವ ಕುರಿತು ಮಾಹಿತಿ ನೀಡಿದ ಅವರು ಅಗ್ನಿ ಅನಾಹುತ ತಪ್ಪಿಸುವ ಬಗ್ಗೆ ನಡೆಸಲಾಗುತ್ತಿರುವ ಜನಜಾಗೃತಿ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೆರವೇರಿಸಿಕೊಟ್ಟ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆಶಾಲತಾ ಪಿ.ರವರು ಭಾರತೀಯ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೆ ತನ್ನ ಹಕ್ಕನ್ನು ಮಂಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಜನರ ಧ್ವನಿಯನ್ನು ಸಮಾಜಕ್ಕೆ ತಿಳಿಸುವ ಉದ್ಧೇಶವಿರಬೇಕು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಪತ್ರಗಾರಿಕೆ ಇರಬಾರದು. ಪತ್ರಿಕಾಂಗ ಸಂವಿಧಾನದ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿದ್ದು ಶೋಷಣೆಮುಕ್ತ, ದೌರ್ಜನ್ಯಮುಕ್ತ ಸಮಾಜ ನಿರ್ಮಿಸಲು ಸೌಹಾರ್ದಯುತವಾಗಿ, ಭ್ರಾತೃತ್ವದ ಜವಾಬ್ದಾರಿಯನ್ನು ಪತ್ರಕರ್ತರು ವಹಿಸಿಕೊಳ್ಳಬೇಕು. ಜನಧ್ವನಿಯಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು ಅವರ ಕಾರ್ಯವೈಖರಿ ಶ್ಲಾಘನೀಯ ಎಂದರು.

ಪುತ್ತೂರು ಕಹಳೆ ನ್ಯೂಸ್ ಚಾನೆಲ್ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಕರಾತ್ಮಕ ಹಾಗೂ ನಕಾರಾತ್ಮಕ ಹೀಗೆ ಎರಡು ಆಯಾಮಗಳಿದ್ದು ಇದು ಓದುಗನ ಮಾನಸಿಕತ್ವದ ಮೇಲೆ ನಿಂತಿದೆ. ಸಕರಾತ್ಮಕ ವರದಿಗಳಿಗೆ ಓದುಗರ ಸಂಖ್ಯೆ ಕಡಿಮೆ, ಆದರೆ ನಕಾರಾತ್ಮಕ ವರದಿಗಳಿಗೆ ಓದುಗರ ಸಂಖ್ಯೆ ಅಧಿಕವಾಗಿರುವುದು ಇತ್ತೀಚೆಗಿನ ವಿದ್ಯಮಾನದಲ್ಲಿ ಕಾಣ ಸಿಗುತ್ತದೆ. ಕೆಲವೊಮ್ಮೆ ನಿಷ್ಠುರ, ಪ್ರಖರ, ನಿಖರವಾದ ವರದಿಗಳನ್ನು ಹಾಕಿ ಸ್ಟೇಷನ್ ಮೆಟ್ಟಿಲು ಹತ್ತಿದ್ದೂ ಇದೆ. ಉದಯೋನ್ಮುಖ ಪತ್ರಕರ್ತರು ವರದಿಗೆ ತೆರಳಿದಾಗ ಅಲ್ಲಿನ ಪ್ರತಿಯೋರ್ವರ ಭಾಷಣಗಳನ್ನು ಇಷ್ಟಪಟ್ಟು ಕೇಳುವಂತರಾಗಬೇಕು. ಪುತ್ತೂರಿನಲ್ಲಿ ಪತ್ರಕರ್ತರ ನಡುವೆ ಭಿನ್ನಾಭಿಪ್ರಾಯಗಳಿದ್ದು ಇದನ್ನು ದೂರ ಮಾಡಲು ಈ ಯೂನಿಯನ್ ಪ್ರಯತ್ನಿಸಬೇಕು ಎಂದರು. ಡಾ. ಯು.ಪಿ. ಶಿವಾನಂದರವರ ನೇತೃತ್ವದಲ್ಲಿ ಸುದ್ದಿ ಬಿಡುಗಡೆ ಬಳಗ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವುದು ಒಳ್ಳೆಯ ಕಾರ್ಯ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕಾನಂದ ಕಾಲೇಜಿನ ಸಂಚಾಲಕರಾದ ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್. ಮಾತನಾಡಿ ಪತ್ರಿಕಾ ದಿನಾಚರಣೆ ಸಂದರ್ಭ ಆದರ್ಶ ವ್ಯಕ್ತಿಗೆ ಸನ್ಮಾನ ಮಾಡಿರುವುದು ಶ್ಲಾಘನೀಯ. ಯಾವುದೇ ವರದಿಯನ್ನು ಮಾಡುವಾಗ ಅದು ನಿಖರವಾಗಿರಬೇಕು, ಸತ್ಯವಾಗಿರಬೇಕು, ಪರಾಮರ್ಶೆ ಮಾಡುವಂತಿರಬೇಕು. ಸತ್ಯಶೋಧಕರಾಗಿ ಪತ್ರಕರ್ತರು ಕೆಲಸ ಮಾಡಬೇಕು. ಯುವ ಪತ್ರಕರ್ತರು ಸಾಹಿತ್ಯವನ್ನು ಓದುವ ಪರಿಪಾಠ ಬೆಳೆಸಬೇಕು. ಯಾವುದೇ ಬರಹ, ಲೇಖನ ಓದುಗರಿಗೆ ತಲುಪಬೇಕಾದರೆ ಅಲ್ಲಿ ಉತ್ತಮ ಸಾಹಿತ್ಯದ ಅಗತ್ಯವಿದೆ. ಮಾಧ್ಯಮಗಳು ಸಮಾಜಕ್ಕೆ ದೃಷ್ಠಿ ಕೊಡುವ ಮಾಧ್ಯಮಗಳಾಗಬೇಕು ಎಂದರು.

ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ಹಾಗೂ ಕಾರ್ಯಾಗಾರಕ್ಕೆ ಸಹಕಾರ ನೀಡಿದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ನಿಡ್ಪಳ್ಳಿರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಪುರುಷೋತ್ತಮ ಶೆಟ್ಟಿ ನುಳಿಯಾಲು ಮಾಲಕತ್ವದ ಯಮುನಾ ಹೋಮ್ಸ್ ಆಂಡ್ ಡಿಸೈನ್ಸ್, ಯಮುನಾ ಬೋರ್‌ವೆಲ್ಸ್‌ರವರಿಂದ ತಾಲೂಕು ಜರ್ನಲಿಸ್ಟ್ ಯೂನಿಯನ್‌ನ ಸದಸ್ಯರಿಗೆ ಉತ್ತಮ ಗುಣಮಟ್ಟದ ಕೊಡೆಗಳನ್ನು ವಿತರಣೆ ಮಾಡಲಾಯಿತು.

ತಾಲೂಕು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿಣಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಪೆರುವಾಯಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ಸ್ವಾಗತಿಸಿ ಉಪಾಧ್ಯಕ್ಷೆ ಕವಿತಾ ಮಾಣಿ ವಂದಿಸಿದರು. ಉಪಾಧ್ಯಕ್ಷೆ ಚೈತ್ರಾ ಭೂಷಣ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷೆ ಹೇಮಾ ಜಯರಾಂ ಕಾರ್ಯಕ್ರಮ ನಿರೂಪಿಸಿದರು.

ಜರ್ನಲಿಸ್ಟ್‌ ಯೂನಿಯನ್ ನ ಜಿಲ್ಲಾ ಉಪಾಧ್ಯಕ್ಷರಾದ ಜ್ಯೋತಿಪ್ರಕಾಶ್ ಪುಣಚ, ತಾಲೂಕು ಜರ್ನಲಿಸ್ಟ್‌ ಯೂನಿಯನ್ ನ ಜತೆ ಕಾರ್ಯದರ್ಶಿ ಚಿನ್ಮಯಕೃಷ್ಣ, ಕೋಶಾಧಿಕಾರಿ ಪ್ರಜ್ವಲ್ ಕೋಟ್ಯಾನ್, ಆದಿತ್ಯ ಈಶ್ವರಮಂಗಲ, ಚಂದ್ರಕಾಂತ್ ಉರ್ಲಾಂಡಿ, ದೀಪಕ್ ಹೊಸ್ಮಠ, ಪ್ರಶಾಂತ್ ಸಿ.ಎಚ್., ಜಯಪ್ರಕಾಶ್ ಬದಿನಾರು, ಜಗದೀಶ್ ಕಜೆ, ಶಶಿಧರ ನೆಕ್ಕಿಲಾಡಿ, ಸುಭಾಶ್ಚಂದ್ರ ಕೆ, ಗುಣಕರ ಏಕ, ಮನ್ಮಥ ಶೆಟ್ಟಿ, ಪ್ರಭಾಕರ ವಿಟ್ಲ, ರಾಜೇಶ್ ವಿಟ್ಲ, ರಕ್ಷಿತಾ ಮತ್ತಿತರರು ಸಹಕರಿಸಿದರು.

https://www.facebook.com/share/v/VSU2YRs4vkJUs17i/?mibextid=NoJtEM

- Advertisement -

Related news

error: Content is protected !!