




ಪುತ್ತೂರು: ಲವ್–ಸೆಕ್ಸ್–ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮಗಳಿಗೆ ನ್ಯಾಯ ದೊರಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿರುವ ಸಂತ್ರಸ್ತೆಯ ತಾಯಿ ನಮಿತಾ, ಪಿ.ಜಿ. ಜಗನ್ನಿವಾಸ ರಾವ್ ಅವರನ್ನು ದೇವಳದ ಧಾರ್ಮಿಕ ಚಟುವಟಿಕೆಗಳಿಂದ ದೂರವಿಡಬೇಕು ಎಂದು ಒತ್ತಾಯಿಸಿದ್ದಾರೆ.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದಿದ್ದು ಒಂದು ವರ್ಷ ಕಳೆದರೂ ನ್ಯಾಯ ಸಿಗದೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. ತನ್ನ ಮಗನಿಂದ ನಡೆದ ಅನ್ಯಾಯವನ್ನು ಸರಿಪಡಿಸುವ ಬದಲು, ಜಗನ್ನಿವಾಸ ರಾವ್ ಅವರು ಮಗನನ್ನು ರಕ್ಷಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
“ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದರೂ, ಹಲವು ತಿಂಗಳು ಕಾಲ ಕಳೆಯುತ್ತಾ ನಮ್ಮನ್ನು ದಾರಿ ತಪ್ಪಿಸಿದರು. ಈಗ ಮಗುವಿಗೆ 10 ತಿಂಗಳು ಆಗುತ್ತಿದೆ. ಆದರೂ ಮದುವೆ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಅವರ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಮಾತಾಡದೆ ಇದ್ದರೂ, ಇನ್ನು ಮುಂದೆ ಅವರನ್ನು ದೇವಳದ ಯಾವುದೇ ಕಾರ್ಯಗಳಲ್ಲಿ ಸೇರಿಸಬಾರದು ಎಂದು ಮನವಿ ಮಾಡಿದರು. “ಜಾತ್ರೋತ್ಸವದ ಧ್ವಜಾರೋಹಣದ ದಿನವಾದ ಏಪ್ರಿಲ್ 10ರಂದು, ಧ್ವಜಸ್ತಂಭದ ಮುಂದೆ ಕುಳಿತು ನ್ಯಾಯಕ್ಕಾಗಿ ಧರಣಿ ನಡೆಸುತ್ತೇನೆ” ಎಂದು ಅವರು ಎಚ್ಚರಿಸಿದರು.
ಇನ್ನೊಂದೆಡೆ, ವಿಶ್ವಕರ್ಮ ಯುವ ಮಿಲನ್ ಸಂಘಟನೆಯ ಸ್ಥಾಪಕಾಧ್ಯಕ್ಷ ವಿಕ್ರಂ ಆಚಾರ್ಯ ಕೂಡ ಈ ವಿಷಯಕ್ಕೆ ಬೆಂಬಲ ವ್ಯಕ್ತಪಡಿಸಿದರು. “ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಂಘಟನೆ ಮುಂದಿನ ಹಂತದ ತೀರ್ಮಾನ ಕೈಗೊಳ್ಳಲಿದೆ” ಎಂದು ತಿಳಿಸಿದರು.
ಸಂತ್ರಸ್ತೆಯ ತಾಯಿ ನಡೆಸುವ ಪ್ರತಿಭಟನೆಗೆ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದೂ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.








