ಪುತ್ತೂರು ನಗರದ ದರ್ಭೆಯಲ್ಲಿರುವ ಡಿಜಿಟಲ್ ಸೇವಾ ಕೇಂದ್ರದಲ್ಲಿ ಇಂದು ಮಧ್ಯಾಹ್ನ ದಾಖಲೆಪತ್ರ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತು ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆದಿದೆ.
ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬ ಮೂವರು ದರ್ಭೆಯಲ್ಲಿರುವ ಅಂಜನಾ ಪೈ ಅವರ “Dream Destination Digital Seva Kendra” ಎಂಬ ಅಂಗಡಿಗೆ ಕೆಲವು ದಾಖಲೆಗಳನ್ನು Xerox ಮತ್ತು Lamination ಮಾಡಲು ನೀಡಿದ್ದರು. ಈ ವೇಳೆ ಒಂದು ದಾಖಲೆಪತ್ರ ತಾಂತ್ರಿಕ ದೋಷದಿಂದ ಸುಟ್ಟುಹೋಗಿದೆ ಎಂದು ಅಂಗಡಿ ಕಡೆಯಿಂದ ತಿಳಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರಾದ ಮುಬಾಶಿರ, ಫಾತೀಮಾ, ಮುಬಾಶಿರ್ ಮತ್ತು ಅಂಗಡಿ ಮಾಲೀಕೆ ಅಂಜನಾ ಪೈ ಹಾಗೂ ಅವರ ಮಗ ಸುದರ್ಶನ್ ಪೈ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಜನರು ಜಮಾಯಿಸಿದ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಎರಡೂ ಕಡೆಯವರಿಗೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದಾರೆ. ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆತರುವ ವೇಳೆ ಸ್ಥಳದಲ್ಲಿ ಸೇರಿದ್ದ ಕೆಲವರು ತಡೆಯೊಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪರಸ್ಪರ ದೂರು ಹಾಗೂ ಪ್ರತಿ ದೂರು ದಾಖಲಾಗುತ್ತಿದೆ. ಜೊತೆಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರತ್ಯೇಕ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪುತ್ತೂರು ನಗರ ಠಾಣೆ ಮೂಲಗಳು ಹೇಳಿವೆ. ಪ್ರಕರಣಗಳು ದಾಖಲಾದ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು.
ಘಟನೆ ನಡೆದ ಅಂಗಡಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಸಿಸಿ ಟಿವಿ ಪರಿಶೀಲಿಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಯಾವುದೇ ಸುಳ್ಳು ವದಂತಿಗಳನ್ನು ಪ್ರಸಾರ ಮಾಡಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.








