Sunday, June 14, 2026
spot_imgspot_img
spot_imgspot_img

ಪುತ್ತೂರು: ಕೋವಿಡ್ ಲಸಿಕೆಯ ಟೋಕನ್ ಹಂಚಿಕೆಯಲ್ಲಿ ತಾರತಮ್ಯ; ಸಾರ್ವಜನಿಕರಿಂದ ಆಕ್ರೋಶ!

- Advertisement -
- Advertisement -

ಪುತ್ತೂರು: ಕೋವಿಡ್ ನಿರೋಧಕ ಲಸಿಕೆ ನೀಡುವ ಸಂಬಂಧ ಟೋಕನ್ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಂತು ಪಡೆಯಬೇಕಾಗಿದ್ದ ಟೋಕನ್ ವ್ಯವಸ್ಥೆ, ಅವ್ಯವಸ್ಥೆಯಿಂದ ಕೂಡಿದೆ ಎಂದು ತಾಲ್ಲೂಕಿನ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಲಸಿಕೆ ಪಡೆಯಲು ಬಂದಿದ್ದ ಸಾರ್ವಜನಿಕರು ಆರೋಪಿಸಿದರು.

ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವ್ಯಾಕ್ಸಿನ್ ಒಟ್ಟು 120 ಡೋಸ್ ಬಂದಿದ್ದು, ಮೊದಲು ಲಸಿಕೆ ಪಡೆದುಕೊಂಡಿರುವವರಿಗೆ ಎರಡನೇ ಡೋಸ್ ಬಂದಿರುವ ಬಗ್ಗೆ ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಎರಡನೇ ಡೋಸ್ ಪಡೆದುಕೊಳ್ಳಲು ಹಲವಾರು ಮಂದಿ ಆಸ್ಪತ್ರೆಗೆ ಬಂದಿದ್ದು, ಈ ಸಂದರ್ಭದಲ್ಲಿ ಟೋಕನ್ ವಿತರಣೆಯಲ್ಲಿ ಅವ್ಯವಸ್ಥೆ ಆಗಿದೆ ಎಂದು ಆರೋಪಿಸಿದ ಜನರು, ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ಸಾಲಿನಲ್ಲಿ ನಿಂತವರಿಗೆ ಆದ್ಯತೆ ನೀಡಿ ಟೋಕನ್ ನೀಡಿಲ್ಲ, ಬೇಕಾಬಿಟ್ಟಿ ವಿತರಿಸಲಾಗಿದೆ. ಆಸ್ಪತ್ರೆ ವ್ಯಾಪ್ತಿಯ ಹೊರಗಿನವರಿಗೂ ಲಸಿಕೆ ನೀಡಲಾಗಿದೆ. ಕೆಲವರು ತಮ್ಮ ಪ್ರಭಾವ ಬಳಸಿ, ದೂರದ ಊರುಗಳಿಂದ ಬಂದು ಲಸಿಕೆ ಪಡೆಯುತ್ತಿದ್ದಾರೆ’ ಎಂದು ದೂರಿದರು.

‘ಟೋಕನ್ ವಿತರಣೆಯಲ್ಲಿ ಶ್ರೀಮಂತರಿಗೆ ಮೊದಲ ಆದ್ಯತೆ ನೀಡಿ, ಬಡವರನ್ನು ಕಡೆಗಣಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ನೆಟ್ಟಾಳ ಬಾಲಕೃಷ್ಣ ರೈ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಹರಡುವುದನ್ನು ನಿಯಂತ್ರಿಸಲು ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವಿದ್ದರೂ, ಆಸ್ಪತ್ರೆಯಲ್ಲೇ ಈ ನಿಯಮ ಪಾಲನೆಯಾಗಲಿಲ್ಲ. ಬೇಕಾಬಿಟ್ಟಿಯಾಗಿ ಜನರು ಗುಂಪು ಸೇರುತ್ತಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು.

ಕೋವ್ಯಾಕ್ಸಿನ್ ಎರಡನೇ ಡೋಸ್ ನೀಡಲು 120 ಡೋಸ್ ಬಂದಿದೆ. ಟೋಕನ್ ಹಂಚಿಕೆಯಲ್ಲಿ ಸಮಸ್ಯೆ ಆಗಿಲ್ಲ. ಎಲ್ಲರಿಗೂ ಕ್ರಮಬದ್ಧವಾಗಿ ಟೋಕನ್ ನೀಡಲಾಗಿದೆ ಎಂದು ಡಾ.ಭವ್ಯಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!