ಬೆಂಗಳೂರು, ಮೇ 8: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಗುರುವಾರ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, 2024ರಲ್ಲಿ ಕರ್ನಾಟಕದಲ್ಲಿ 334 ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತ ರಾಜ್ಯಗಳ ಪೈಕಿ ತೃತೀಯ ಸ್ಥಾನದಲ್ಲಿದೆ. ಮಹಾರಾಷ್ಟ್ರ (721) ಮತ್ತು ತಮಿಳುನಾಡು (364) ಅನುಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿವೆ.ಆದರೆ ಅಕ್ರಮ ಸಂಪತ್ತು ಗಳಿಕೆ ಪ್ರಕರಣಗಳಲ್ಲಿ ಕರ್ನಾಟಕವು (75) ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಒಡಿಶಾ (62) ಮತ್ತು ಅಸ್ಸಾಂ (44) ಇವೆ.


ಕರ್ನಾಟಕದಲ್ಲಿ 2022ರಲ್ಲಿ ದಾಖಲಾಗಿದ್ದ 389 ಮತ್ತು 2023ರಲ್ಲಿದ್ದ 362 ಭ್ರಷ್ಟಾಚಾರದ ಪ್ರಕರಣಗಳಿಗೆ ಹೋಲಿಸಿದರೆ, 2024ರಲ್ಲಿ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ.ಲೋಕಾಯುಕ್ತ ಮರುಸ್ಥಾಪನೆಯಾದಾಗಿನಿಂದ ಅದು ಸ್ಥಳೀಯ ಮತ್ತು ತಳಮಟ್ಟದಿಂದ ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಶಂಕಿತ ಅಧಿಕಾರಿಗಳ ವಿರುದ್ಧ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದೆ. ಈ ನಿಯಮಿತ ದಾಳಿಗಳಿಂದಾಗಿ ಅಕ್ರಮ ಸಂಪತ್ತು ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ಹಿರಿಯ ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದಾಖಲಾಗಿರುವ 334 ಭ್ರಷ್ಟಾಚಾರ ಪ್ರಕರಣಗಳ ಪೈಕಿ 237 (ಶೇ 60.9) ಪ್ರಕರಣಗಳಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ದಾಳಿಗಳನ್ನು ನಡೆಸಲಾಗಿದೆ.




ಇದು ಲಂಚಕ್ಕೆ ಬೇಡಿಕೆಯಿಟ್ಟಾಗ ಜನರು ಲೋಕಾಯುಕ್ತವನ್ನು ಸಂಪರ್ಕಿಸಲು ಮುಂದಾಗುತ್ತಿದ್ದಾರೆ ಎನ್ನುವುದನ್ನು ತೋರಿಸಿದೆ.ಆದಾಗ್ಯೂ ಲೋಕಾಯುಕ್ತ ಮೂಲಗಳ ಪ್ರಕಾರ ವರದಿಯಾಗಿರುವ ಪ್ರಕರಣಗಳು ಒಂದು ಸಣ್ಣ ಭಾಗ ಮಾತ್ರ.
ಏಕೆಂದರೆ ಜನರು ಈಗಲೂ ಲಂಚ ಬೇಡಿಕೆಯನ್ನು ವರದಿ ಮಾಡಲು ಹಿಂಜರಿಯುತ್ತಿದ್ದಾರೆ. ಇದೊಂದು ನಿಧಾನ ಪ್ರಕ್ರಿಯೆಯಾಗಿದ್ದರೂ, ತಳಮಟ್ಟದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನು ಬಲಗೊಳಿಸುವುದರಿಂದ ಜನರಲ್ಲಿ ವಿಶ್ವಾಸ ಹೆಚ್ಚುತ್ತದೆ. ಇದಕ್ಕಾಗಿ ಹೆಚ್ಚಿನ ಜಾಗೃತಿಯ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








