Friday, September 4, 2026
spot_imgspot_img
spot_imgspot_img

LPG ದರ ಏರಿಕೆ ವಿರೋಧಿಸಿ ಕೇರಳ ಬಂದ್‌- ಹೋಟೆಲ್‌, ರೆಸ್ಟೋರೆಂಟ್‌, ಬೇಕರಿ ಸೇವೆ ಸಂಪೂರ್ಣ ಸ್ಥಗಿತ; ಆಹಾರಕ್ಕಾಗಿ ಜನರ ಪರದಾಟ

- Advertisement -
- Advertisement -

ತಿರುವನಂತಪುರಂ: ವಾಣಿಜ್ಯ LPG ಸಿಲಿಂಡರ್‌ ದರ ಏರಿಕೆಯನ್ನು ವಿರೋಧಿಸಿ ಬುಧವಾರ ಕೇರಳದಾದ್ಯಂತ 24 ಗಂಟೆಗಳ ಮುಷ್ಕರ ನಡೆಯಿತು. ಮುಷ್ಕರದ ಪರಿಣಾಮ ರಾಜ್ಯದಾದ್ಯಂತ ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು, ಬೇಕರಿಗಳು ಹಾಗೂ ಕ್ಯಾಂಟೀನ್‌ ಗಳು ಬಾಗಿಲು ಮುಚ್ಚಿದ್ದರಿಂದ ಸಾವಿರಾರು ಜನರು ಆಹಾರಕ್ಕಾಗಿ ಪರದಾಡುವಂತಾಯಿತು.

ಕೇರಳ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಅಸೋಸಿಯೇಷನ್‌ (KHRA) ನೇತೃತ್ವದಲ್ಲಿ ನಡೆದ ಮುಷ್ಕರಕ್ಕೆ ಹಲವು ವ್ಯಾಪಾರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಇದರ ಪರಿಣಾಮವಾಗಿ ಡೈನ್‌–ಇನ್‌, ಟೇಕ್‌ಅವೇ ಹಾಗೂ ಆನ್‌ಲೈನ್‌ ಆಹಾರ ವಿತರಣಾ ಸೇವೆಗಳು ಸಂಪೂರ್ಣ ಸ್ಥಗಿತಗೊಂಡವು.19 ಕೆಜಿ ವಾಣಿಜ್ಯ LPG ಸಿಲಿಂಡರ್‌ ಬೆಲೆಯಲ್ಲಿ 993 ರೂ. ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್‌ನ ಬೆಲೆ 3,000 ರೂ. ದಾಟಿದೆ. ಈ ಪ್ರಮಾಣದ ದರ ಏರಿಕೆಯಿಂದ ದೈನಂದಿನ ವ್ಯವಹಾರ ನಡೆಸುವುದು ಅಸಾಧ್ಯವಾಗಿದೆ ಎಂದು ಹೋಟೆಲ್‌ ಮಾಲೀಕರು ಹೇಳಿದ್ದಾರೆ.ತಿರುವನಂತಪುರಂನಲ್ಲಿ ಸಾಮಾನ್ಯವಾಗಿ ಕಚೇರಿ ನೌಕರರು ಮತ್ತು ಬೀದಿ ವ್ಯಾಪಾರಿಗಳಿಂದ ಗಿಜಿಗುಡುತ್ತಿದ್ದ ತಿನಿಸು ಅಂಗಡಿಗಳು ದಿನಪೂರ್ತಿ ಮುಚ್ಚಲ್ಪಟ್ಟಿದ್ದವು. ‘ಉಪಾಹಾರ ಸೇವಿಸಬೇಕೆಂದು ಹೊರಟಿದ್ದೆ. ಆದರೆ ಎಲ್ಲೆಡೆ ಹೋಟೆಲ್‌ಗಳು ಬಂದ್‌ ಆಗಿದ್ದವು. ಒಂದು ಕಪ್‌ ಚಹಾ ಕೂಡ ಸಿಗಲಿಲ್ಲ’ ಎಂದು ವೆಲ್ಲಯಾನಿಯ ತರಕಾರಿ ವ್ಯಾಪಾರಿ ಲಕ್ಷ್ಮಿ ಹೇಳಿದರು. ರಾಜಧಾನಿಯ ಪ್ರಮುಖ ಸಾರಿಗೆ ಕೇಂದ್ರವಾದ ತಂಪನೂರಿನಲ್ಲಿಯೂ ಇದೇ ದೃಶ್ಯ ಕಂಡುಬಂತು.

ಬೆಳಿಗ್ಗೆ ಪ್ರಯಾಣ ಆರಂಭಿಸಿದ್ದ ಅನೇಕರು ಆಹಾರ ಸಿಗದೆ ಸಂಕಷ್ಟ ಅನುಭವಿಸಿದರು.‘ಸಾಮಾನ್ಯವಾಗಿ ರೈಲು ಹತ್ತುವ ಮೊದಲು ಉಪಾಹಾರ ಸೇವಿಸುತ್ತೇನೆ. ಆದರೆ ಇಲ್ಲಿಗೆ ಬಂದ ಬಳಿಕವೇ ಎಲ್ಲವೂ ಮುಚ್ಚಲ್ಪಟ್ಟಿರುವುದು ಗೊತ್ತಾಯಿತು. ಮುಷ್ಕರದ ಬಗ್ಗೆ ಮಾಹಿತಿ ಇರಲಿಲ್ಲ. ರೈಲು ನಿಲ್ದಾಣದ ಅಂಗಡಿಗಳಲ್ಲಿದ್ದ ಬಿಸ್ಕತ್ತುಗಳನ್ನೇ ತಿಂದು ದಿನ ಕಳೆಯಬೇಕಾದ ಸ್ಥಿತಿ ಬಂದಿದೆ’ ಎಂದು ಕೊಲ್ಲಂನಲ್ಲಿ ಕೆಲಸ ಮಾಡುವ ಸತೀಶ್‌ ಹೇಳಿದರು.ಆದರೆ ಕೆಲವು ರಸ್ತೆಬದಿ ಚಹಾ ಅಂಗಡಿಗಳು, ಆಸ್ಪತ್ರೆಗಳ ಸಮೀಪದ ಕೆಲವು ರೆಸ್ಟೋರೆಂಟ್‌ಗಳು ಹಾಗೂ ಸರ್ಕಾರಿ ಕಚೇರಿಗಳ ಕ್ಯಾಂಟೀನ್‌ಗಳು ಸೀಮಿತ ಸೇವೆ ನೀಡಿದ ಕಾರಣ ಜನರಿಗೆ ಸ್ವಲ್ಪ ಮಟ್ಟಿನ ನೆರವು ದೊರೆಯಿತು.

ಪ್ರತಿಭಟನೆಯ ಭಾಗವಾಗಿ ತಿರುವನಂತಪುರದ ಪಲಾಯಂನಲ್ಲಿರುವ ಹುತಾತ್ಮರ ಸ್ತಂಭದಿಂದ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಧರಣಿ ನಡೆಸಿದರು.ಕಳೆದ ಆರು ತಿಂಗಳಲ್ಲಿ ವಾಣಿಜ್ಯ LPG ಸಿಲಿಂಡರ್‌ ದರ ಬಹುತೇಕ ದ್ವಿಗುಣಗೊಂಡಿದೆ ಎಂದು KHRA ಪದಾಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್‌ 2025ರಲ್ಲಿ 1,684 ರೂ. ಇದ್ದ ಸಿಲಿಂಡರ್‌ ದರ, ಫೆಬ್ರವರಿಯಲ್ಲಿ 1,845 ರೂ., ಮಾರ್ಚ್‌ನಲ್ಲಿ 1,912 ರೂ., ಎಪ್ರಿಲ್‌ ನಲ್ಲಿ 2,112 ರೂ. ಏರಿಕೆಯಾಗಿ, ಇದೀಗ 3,100 ರೂ. ದಾಟಿದೆ ಎಂದು ಅವರು ವಿವರಿಸಿದರು.ಕಾರ್ಮಿಕ ವೆಚ್ಚ ಹಾಗೂ ಕಚ್ಚಾ ವಸ್ತುಗಳ ದರ ಏರಿಕೆಯಿಂದ ಆಹಾರ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೋಟೆಲ್‌ ಮಾಲೀಕರು ಹೇಳಿದ್ದಾರೆ.

- Advertisement -

Related news

error: Content is protected !!