Thursday, July 23, 2026
spot_imgspot_img
spot_imgspot_img

ಸ್ವಚ್ಛತೆ ಕೇವಲ ಮಾತಲ್ಲ; ಬಾಳ ನಡೆಯಾಗಲಿ- ಇಂದು ವಿಶ್ವ ಭೂಮಿ ದಿನ

- Advertisement -
- Advertisement -

@ಡಾ.ಮೈತ್ರಿ ಭಟ್, ವಿಟ್ಲ

ಇಂದಿನ ನಮ್ಮ ವೇಗದ ಯಾಂತ್ರಿಕ ಜೀವನಶೈಲಿ, ನಗರೀಕರಣ ಮತ್ತು ಬಳಸಿ ಎಸೆವ ಸಂಸ್ಕೃತಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸದ್ದಿಲ್ಲದೇ ಮೌನವಾಗಿ ಹಾನಿಗೊಳಿಸುತ್ತಿವೆ. ಎಲ್ಲಿ ನೋಡಿದರೂ ರಸ್ತೆಗಳ ಬದಿಯಲ್ಲಿ ಕಸದ ಗುಡ್ಡಗಳು, ನದಿಗಳಲ್ಲಿ ಹರಿದು ಹೋಗುವ ಪ್ಲಾಸ್ಟಿಕ್ ತ್ಯಾಜ್ಯ, ಉಸಿರಾಡುವ ಗಾಳಿಯಲ್ಲಿ ಬೆರೆತು ಹೋಗಿರುವ ಮಾಲಿನ್ಯ ಇವೆಲ್ಲವೂ ನಮ್ಮ ನಿರ್ಲಕ್ಷ್ಯದ ಪರಿಣಾಮಗಳೇ ಆಗಿವೆ. ಹೀಗಿರುವಾಗ ವಿಶ್ವ ಭೂಮಿ ದಿನದ ಆಚರಣೆಯ ಈ ದಿನ ಈ ಬಗ್ಗೆ ಒಂದಿಷ್ಟು ಆಲೋಚಿಸೋಣವೇ…?‘

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂಬುದು ಕೇವಲ ಘೋಷಣೆಯಲ್ಲ. ಅದು ಜವಾಬ್ದಾರಿಯೂ ಹೌದು. ಅದರಲ್ಲೂ ಮುಖ್ಯವಾಗಿ ಈ ಪರಿಸರ ಸಂರಕ್ಷಣೆ ಎಂಬ ಮಹತ್ವದ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ. ಆದರೆ ಪ್ರಶ್ನೆ ಏನೆಂದರೆ ಇಂದಿನ ವಿದ್ಯಾರ್ಥಿಗಳು ಈ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ಅರಿತಿದ್ದಾರೆ ಎಂಬುದೇ ಆಗಿದೆ. ಮಾತ್ರವಲ್ಲ, ನಾವಿಂದು ಈ ಸಮಸ್ಯೆಯನ್ನು ಕೇವಲ ಸರ್ಕಾರ ಅಥವಾ ಸಂಸ್ಥೆಗಳ ಹೊಣೆ ಎಂಬುದಾಗಿ ಮಾತ್ರ ನೋಡದೆ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿಯಬೇಕಾದ ಅಗತ್ಯ ಹೆಚ್ಚಾಗಿದೆ.ಹೌದು… ಕಸದ ಸಮಸ್ಯೆ ದಿನೇದಿನೇ ಎಷ್ಟು ಗಂಭೀರವಾಗುತ್ತಿದೆಯೆಂದರೆ ಪ್ಲಾಸ್ಟಿಕ್ ಕವರ್ ಬಳಸಿದ ಬಳಿಕ ನಾವು ಅದನ್ನು ಎಲ್ಲಿ ಹಾಕುತ್ತೇವೆ ಎಂಬುದನ್ನು ಯೋಚಿಸುವುದೇ ಇಲ್ಲ. ಚಾಕಲೇಟ್ ಅಥವಾ ಕುರುಕುರೆ, ಲೇಸ್ ತಿಂದ ಬಳಿಕ ಅದರ ಕವರ್ ಅನ್ನು ಎಲ್ಲೆಂದರಲ್ಲಿ ಎಸೆದು ಬಿಡುತ್ತೇವೆ. ಆದರೆ ಅದು ಬಿದ್ದ ಜಾಗದಲ್ಲಿ ಅಂದರೆ ನೆಲದಲ್ಲಿ, ನೀರಿನಲ್ಲಿ ಅಥವಾ ವಾತಾವರಣದಲ್ಲಿ ದೀರ್ಘಕಾಲ ಉಳಿದು ಪ್ರಕೃತಿಗೆ ಹಾನಿಯನ್ನುಂಟುಮಾಡುತ್ತದೆ.ಕಸದ ಈ ಅಸಮರ್ಪಕ ನಿರ್ವಹಣೆ ನಮ್ಮ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ. ಕಸದ ರಾಶಿಗಳು ಕೀಟಾಣುಗಳು ಬೆಳೆಯುವ ಕೇಂದ್ರಗಳಾಗಿ ಡೆಂಗ್ಯೂ, ಮಲೇರಿಯಾ, ಟೈಫಾಯ್ಡ್ ಮುಂತಾದ ರೋಗಗಳು ಹರಡಲು ಕಾರಣವಾಗುತ್ತವೆ ಎಂಬುದಾಗಿ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛತೆಯ ಬಗ್ಗೆ ಪಾಠಗಳನ್ನು ಕಲಿತರೂ ದೈನಂದಿನ ಜೀವನದಲ್ಲಿ ಅದನ್ನು ಅನುಸರಿಸುವುದು ಕಡಿಮೆ. ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಕ್ಯಾಂಪಸ್‌ನಲ್ಲಿ ಕಸ ಹಾಕುವುದು – ಇವು ಎಲ್ಲೆಡೆ ಕಾಣುವ ಸಾಮಾನ್ಯ ದೃಶ್ಯಗಳಾಗಿವೆ.ಇದಕ್ಕೆ ಮುಖ್ಯ ಕಾರಣ – “ಇದು ನನ್ನ ಕೆಲಸವಲ್ಲ” ಎಂಬ ಮನೋಭಾವ. ಸ್ವಚ್ಛತೆ ಮತ್ತು ಪರಿಸರ ರಕ್ಷಣೆ ಸರ್ಕಾರದ ಅಥವಾ ಪೌರ ಕಾರ್ಮಿಕರ ಹೊಣೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಹೆಚ್ಚಾಗಿದೆ.

ಈ ಮನೋಭಾವವೇ ಸಮಸ್ಯೆಯ ದೊಡ್ಡ ಮೂಲ. ಇನ್ನೊಂದೆಡೆ ಡಿಜಿಟಲ್ ಜಗತ್ತಿನಲ್ಲಿ ಮುಳುಗಿರುವ ಜನತೆ ಜಗತ್ತಿನ ನೈಜ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಜೊತೆಗೆ ಪರಿಸರದ ಬಗ್ಗೆ ತಿಳಿವಳಿಕೆ ಇದ್ದರೂ ಅದನ್ನು ಕಾರ್ಯಗತಗೊಳಿಸುವ ಕ್ರಿಯಾತ್ಮಕ ಇಚ್ಛಾಶಕ್ತಿಯ ಕೊರತೆಯಿದೆ. ಪರಿಸರ ರಕ್ಷಣೆ ಎನ್ನುವುದು ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ಅದು ನಮ್ಮ ಜೀವನ ಶೈಲಿಯಾಗಿ ರೂಪುಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಪರಿಸರ ಜಾಗೃತಿಯ ಕೇಂದ್ರವಾಗಬೇಕು. ಕೇವಲ ಪಾಠ ಹೇಳಿದರೆ ಸಾಲದು; ಪ್ರಾಯೋಗಿಕ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಉದಾಹರಣೆಗೆ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್, ಗಿಡ ನೆಡುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಬೇಕು. ವಿದ್ಯಾರ್ಥಿಗಳು ಇವುಗಳಲ್ಲಿ ಸ್ವತಃ ಭಾಗವಹಿಸಿದಾಗ ಅವರಿಗೆ ಅದರ ಮಹತ್ವದ ಅರಿವಾಗುತ್ತದೆ. ಮುಖ್ಯವಾಗಿ “Reduce, Reuse, Recycle” ಎಂಬ ತತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಇದನ್ನು ಅನುಸರಿಸಿದರೆ ಕಸದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಅಂತೆಯೇ ಪರಿಸರಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಿ ಕಸ ವಿಂಗಡಣೆ, ನೀರಿನ ಮಿತಬಳಕೆ ಇತ್ಯಾದಿಗಳನ್ನು ದೈನಂದಿನ ಜೀವನದ ಭಾಗವನ್ನಾಗಿಸಬೇಕು.

ಮುಖ್ಯವಾಗಿ ವಿದ್ಯಾರ್ಥಿಗಳ ನಡೆಗೆ ಪೋಷಕರ ಕೊಡುಗೆ ದೊಡ್ಡದು. ಮನೆಯಲ್ಲಿ ಸ್ವಚ್ಛತೆಯನ್ನು ಪಾಲಿಸುವುದು, ಕಸವನ್ನು ಸರಿಯಾಗಿ ವಿಂಗಡಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಇತ್ಯಾದಿಗಳನ್ನು ಪೋಷಕರು ಅನುಸರಿಸಿದಾಗ ಮಕ್ಕಳು ಅವರನ್ನು ಅನುಕರಿಸುತ್ತಾರೆ. ಸ್ಥಳೀಯ ಸಂಸ್ಥೆಗಳು, ಸಂಘಟನೆಗಳು ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿ ಪರಿಸರ ಅಭಿಯಾನಗಳನ್ನು ನಡೆಸಬೇಕು. ಹೀಗೆ ಎಲ್ಲರ ಸಾಮೂಹಿಕ ಪ್ರಯತ್ನದಿಂದ ಮಾತ್ರ ನಮ್ಮನ್ನು ಕಾಡುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಕಸದ ಸಮಸ್ಯೆಯ ಮೂಲದಲ್ಲಿ ಮುಖ್ಯವಾಗಿ ನಮ್ಮ ಬಳಸಿ ಎಸೆವ ಮನೋಭಾವ ಅಡಗಿದೆ. ನಾವು ಅಗತ್ಯಕ್ಕಿಂತ ಹೆಚ್ಚು ಖರೀದಿ ಮಾಡಿ ಬಳಸಿದ ನಂತರ ಅದನ್ನು ಎಸೆಯುತ್ತೇವೆ. ಇದಕ್ಕೆ ಪರಿಹಾರ ಕೇವಲ ನಿಯಮ, ಕಾನೂನುಗಳಲ್ಲಿ ಇಲ್ಲ; ನಮ್ಮ ಮನೋಭಾವದ ಬದಲಾವಣೆಯಲ್ಲಿದೆ. ನಾವು ನಮ್ಮ ಜೀವನಶೈಲಿಯನ್ನು ಮೌಲ್ಯಾಧಾರಿತವಾಗಿ ರೂಪಿಸಿಕೊಂಡು “ನಾನು ಮಾಡುವ ಸಣ್ಣ ತಪ್ಪು ಕೂಡಾ ಪರಿಸರಕ್ಕೆ ಹಾನಿಯುಂಟು ಮಾಡಬಹುದು” ಎಂಬ ಅರಿವನ್ನು ಹೊಂದಬೇಕು.

ಅದರಲ್ಲೂ ಪರಿಸರ ರಕ್ಷಣೆಗಾಗಿ ನಾವು ಕೆಲವು ಸರಳ ಸಂಕಲ್ಪಗಳನ್ನು ಮಾಡಬಹುದು:

ಎಲ್ಲೆಂದರಲ್ಲಿ ಕಸ ಎಸೆಯುವುದಿಲ್ಲ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುತ್ತೇನೆ, ಗಿಡಗಳನ್ನು ನೆಟ್ಟು ಸಂರಕ್ಷಿಸುತ್ತೇನೆ, ಇತರರಿಗೆ ಜಾಗೃತಿ ಮೂಡಿಸುತ್ತೇನೆ ಇತ್ಯಾದಿ. ಈ ಸಣ್ಣ ಸಣ್ಣ ಹೆಜ್ಜೆಗಳೇ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲುದು.ಒಟ್ಟಿನಲ್ಲಿ, ಕಸ ವಿಲೇವಾರಿ ಮತ್ತು ಪರಿಸರ ರಕ್ಷಣೆ ಎಂಬುದು ಇಂದಿನ ಸಮಾಜದ ಅತ್ಯಂತ ಗಂಭೀರ ಸಮಸ್ಯೆ. ಇದನ್ನು ನಿರ್ಲಕ್ಷಿಸಿದರೆ ಭವಿಷ್ಯದ ಪೀಳಿಗೆಗೆ ನಾವು ಅಪಾಯಕರ ಪರಿಸರವನ್ನು ಬಿಟ್ಟುಕೊಡುತ್ತೇವೆ. ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯವಷ್ಟೇ ಅಲ್ಲ, ಅದು ನಮ್ಮ ಅಸ್ತಿತ್ವದ ಪ್ರಶ್ನೆಯೂ ಹೌದು. ಹೀಗಿರುವಾಗ ಸ್ವಚ್ಛತೆ, ಸಂರಕ್ಷಣೆ ಮತ್ತು ಜವಾಬ್ದಾರಿಯನ್ನು ಅಳವಡಿಸಿಕೊಂಡಾಗ ಮಾತ್ರ ಭೂಮಿ ಹಸಿರಾಗಿ ಉಳಿಯಲು ಸಾಧ್ಯ.

- Advertisement -

Related news

error: Content is protected !!