
ಗೋರಖ್ ಪುರ್: ವಿವಾಹದ ದಿನದಂದೇ ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ವಧುವನ್ನು ವರನು ಐಸಿಯುನಲ್ಲೇ ವರಿಸಿರುವ ಅಪರೂಪದ ಘಟನೆ ಗೋರಖ್ ಪುರ್ ನಲ್ಲಿ ನಡೆದಿದೆ. ವೈದ್ಯರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವಿವಾಹ ಸಮಾರಂಭಕ್ಕೆ ಅನುಮತಿ ನೀಡಿದರು ಎಂದು ವರದಿಯಾಗಿದೆ.

ವಿವಾಹ ದಿನವಾಗಿದ್ದ ಬುಧವಾರದಂದು ಪರೀಕ್ಷೆಯೊಂದನ್ನು ಮುಗಿಸಿಕೊಂಡು ಖಲೀಲಾಬಾದ್ ನಿಂದ ಗೋರಖ್ ಪುರ್ ಗೆ ಮೋಟರ್ ಬೈಕ್ ನಲ್ಲಿ ಮರಳುತ್ತಿದ್ದ ಎಲ್‌ಎಲ್‌ಎಂ ವಿದ್ಯಾರ್ಥಿನಿ ಪೂಜಾ ಯಾದವ್ (25) ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದಾಗ ಆಕೆ ತಮ್ಮ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಪ್ರಯಾಣದ ವೇಳೆ ತಲೆ ಸುತ್ತು ಬಂದು ಪೂಜಾ ರಸ್ತೆಗೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡು, ಭಾರಿ ರಕ್ತಸ್ರಾವಕ್ಕೀಡಾಗಿದ್ದರು. ಆಕೆಯನ್ನು ತಕ್ಷಣವೇ ಗೋರಖ್ ಪುರ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು.

ಅಲ್ಲಿ ವೈದ್ಯರು ಆಕೆಯನ್ನು ಚಿಕಿತ್ಸೆಗಾಗಿ ತುರ್ತು ನಿಗಾ ಘಟಕಕ್ಕೆ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆಯ ಹೊರತಾಗಿಯೂ ಮಹುವಾ ಗ್ರಾಮದ ನಿವಾಸಿ ಸನ್ನಿ ಯಾದವ್ (29) ವಿವಾಹ ಮುಂದುವರಿಸಲು ನಿರ್ಧರಿಸಿದ್ದಾರೆ. ಗುರುವಾರ ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಸ್ಪತ್ರೆ ತಲುಪಿದ ಆತ, ತುರ್ತು ನಿಗಾ ಘಟಕದಲ್ಲೇ ವಿವಾಹ ಸಂಪ್ರದಾಯಗಳನ್ನು ಪೂರೈಸಿದರು ಎನ್ನಲಾಗಿದೆ.

ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಂಬಂಧಿಕರು ಅರ್ಚಕರನ್ನು ವ್ಯವಸ್ಥೆ ಮಾಡಿದ್ದು, ಅವರು ಆಸ್ಪತ್ರೆಯೊಳಗೆ ವಿವಾಹ ಮಂತ್ರಗಳನ್ನು ಪಠಿಸಿದರು ಎಂದು ವರದಿಯಾಗಿದೆ. ಬಳಿಕ ವಧು ಪೂಜಾ ಯಾದವ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸದ್ಯ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.ಬನ್ಸ್ ಗಾಂವ್ ನ ಹತ್ವಾರ್ ಗ್ರಾಮದ ನಿವಾಸಿ ಪೂಜಾ ಹಾಗೂ ಸನ್ನಿ ಯಾದವ್ ರ ವಿವಾಹ ಬುಧವಾರದಂದು ನಿಗದಿಯಾಗಿತ್ತು. ಆದರೆ, ಈ ಅಪಘಾತದಿಂದಾಗಿ ವಿವಾಹ ರದ್ದಾಗಬಹುದು ಎಂದು ಎರಡೂ ಕುಟುಂಬಗಳೂ ಆತಂಕಕ್ಕೀಡಾಗಿದ್ದವು ಎಂದು ಪೊಲೀಸ್ ವೃತ್ತಾಧಿಕಾರಿ ಅನುಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಇಂತಹ ಕಠಿಣ ಸನ್ನಿವೇಶದಲ್ಲಿ ವಿವಾಹ ಕಾರ್ಯಕ್ರಮದೊಂದಿಗೆ ಮುಂದುವರಿಯುವ ವರನ ನಿರ್ಧಾರದಿಂದ ಎರಡೂ ಕುಟುಂಬಗಳಿಗೆ ನಿರಾಳವಾಯಿತು ಎಂದು ಪೂಜಾ ಸಹೋದರ ಅಮನ್ ಯಾದವ್ ಹೇಳಿದ್ದಾರೆ.











