


✍️ – ಸಲೀಂ ಮಾಣಿ
ದೇಶ ವಿದೇಶಗಳಲ್ಲಿ ಸುದ್ದಿಯಾದ ಶೀರೂರು ಗುಡ್ಡ ಕುಸಿತ ಮತ್ತು ಇದು ವರೆಗೂ ಪತ್ತೆಯಾಗದ ಲಾರಿ ಚಾಲಕ ಅರ್ಜುನ್,ಈ ಘಟನೆಯು ದೇಶ ವಿದೇಶಗಳಲ್ಲಿ ಸುದ್ದಿಯಾಯಿತು ಮತ್ತು ಇದುವರೆಗೂ ಕೆಲವು ಜೀವಗಳು ನಾಪತ್ತೆಯಾಗಿಯೇ ಉಳಿಯಿತು ಹಾಗೂ ಘಟನೆಯ ಕೆಲವು ಕಂಪ್ಯೂಟರ್ ವೀಡಿಯೋಗಳು ಬಂದವು. ಭೂಕುಸಿದಲ್ಲಿ ಗುಡ್ಡವು ಬಂದು ಎಲ್ಲವನ್ನೂ ಸೀಳಿಕೊಂಡು ಹೋಗುವ ಭಯಾನಕ ವೀಡಿಯೋವನ್ನು ಎಲ್ಲರೂ ವೀಕ್ಷಿಸಿ ಭಯಭೀತರಾದರು ಕಣ್ಣೀರು ಸುರಿಸಿದರು. ಕೆಲವು ತಿಂಗಳುಗಳ ಬಳಿಕ ಎಲ್ಲವನ್ನೂ ಮರೆತು ಬಿಡುವಂತೆ ಶೀರೂರು ಘಟನೆಯನ್ನು ನಾವು ಮರೆತು ಬಿಡಬಹುದು, ಆದರೆ ನಮ್ಮ ನಮ್ಮ ಊರುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಎಷ್ಟೊಂದು ಇಂತಹ ಅಥವಾ ಇದಕ್ಕಿಂತಲೂ ಅಪಾಯಕಾರಿಯಾದ ಗುಡ್ಡಗಳು ನಿರ್ಮಾಣವಾಗಿದೆ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಯಾರ ಗಮನದಲ್ಲಾದರೂ ಇದೆಯಾ..?
ಶೀರೂರು ಘಟನೆಯ ನಂತರ ಯಾವ ನಂಬಿಕೆಯ ಮೇಲೆ ಇಂತಹ ಗುಡ್ಡಗಳ ಕೆಳಗೆ ವಾಹನಗಳನ್ನು ಚಲಾಯಿಸಬಹುದು ಅಥವಾ ನಿಲ್ಲಿಸಬಹುದು? ಹೇಗೆ ಅದರ ಪಕ್ಕ ಮನೆ ಅಥವಾ ವಾಣಿಜ್ಯ ಸಂಕೀರ್ಣ ಇತರ ಅಂಗಡಿ ಹೋಟೇಲುಗಳನ್ನು ನಿರ್ಮಿಸಬಹುದು ಈಗಾಗಲೇ ಇರುವವರು ಅಲ್ಲಿ ಹೇಗೆ ವಾಸಿಸಬಹುದು..? ಎಂದು ಒಮ್ಮೆ ಶೀರೂರು ಘಟನೆಯನ್ನು ನೆನಪಿಸಿ ಊಹಿಸಿನೋಡಿ ಬಿಲ್‌ಕುಲ್ ಸುರಕ್ಷಿತವಲ್ಲ. ಅಷ್ಟೊಂದು ಅಪಾಯಕಾರಿ ಮತ್ತು ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಳಿಗಾಗಿ ಗುಡ್ಡಗಳು ನಿರ್ಮಾಣವಾಗಿದೆ. ಸಣ್ಣದೊಂದು ತಡೆಗೋಡೆ ನಿರ್ಮಿಸಿದ್ದನ್ನು ಕಂಡು ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿದ್ದೇವೆ ಅಷ್ಟೇ, ಸರಿಯಾಗಿ ಗಮನಿಸಿರಿ ಅಲ್ಲಿ ಕೆಳಗಿನ ಐದು ಆರು ಫೀಟುಗಳು ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ ಮೇಲಿನ ಗುಡ್ಡಗಳು ಹಾಗೆಯೇ ಇದೆ. ನಗ್ನವಾಗಿ ನಿಂತು ಕಾಲಿಗೆ ಸಾಕ್ಸ್ ಹಾಕಿ ಬಟ್ಟೆ ಧರಿಸಲಾಗಿದೆ ಎಂದು ಭಾವಿಸಿದಂತೆ,ಮತ್ತೊಂದು ಶೀರೂರು ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕಾದದ್ದು ತುಂಬಾ ತುಂಬಾ ಜವಾಬ್ದಾರಿಯುತ ಕರ್ತವ್ಯವಾಗಿದೆ.