Friday, April 19, 2024
spot_imgspot_img
spot_imgspot_img

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು, ಸಮೃದ್ಧ ತರಕಾರಿ ತೋಟದಿಂದ ಊರಿಗೇ ಮಾದರಿಯಾದ ಸುರಿಬೈಲು ಸರ್ಕಾರಿ ಶಾಲೆ.

- Advertisement -G L Acharya panikkar
- Advertisement -

ಇದೊಂದು ಸರ್ಕಾರಿ ಶಾಲೆ. ಆದ್ರೆ ಇದು ನಿಜಕ್ಕೂ ಮಾದರಿಯಾದ ಸರ್ಕಾರಿ ಶಾಲೆ. ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಇದು ಭಿನ್ನವಿಲ್ಲ. ಆಟ ಪಾಠದ ಜೊತೆಗೆ ಇಡೀ ಶಾಲೆಯಲ್ಲಿ ಹಸಿರು ನಲನಲಿಸುತ್ತದೆ. ಈ ಶಾಲೆ ಪರಿಸರ  ಸಂರಕ್ಷಣೆ ,ಹಾಗೂ ಸ್ವಚ್ಚತೆಯಲ್ಲೂ ಎತ್ತಿದ ಕೈ. ಅಷ್ಟಕ್ಕೂ ಹೇಗಿದೆ ಈ ಶಾಲೆ …. ಈ ಸ್ಟೋರಿ ನೋಡಿ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದ ವಿಟ್ಲದ ಸುರಿಬೈಲು ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ. ಸರ್ಕಾರಿ ಶಾಲೆ ಅಂದ್ರೆ ಅಲ್ಲಿ ಯಾವುದೇ ಮೂಲಭೂತ ಸೌಕರ್ಯ ಇರೋದಿಲ್ಲ. ಶಿಕ್ಷಣದ ಗುಣಮಟ್ಟವೂ ಚೆನ್ನಾಗಿರಲ್ಲ. ಇನ್ನು ಶಿಸ್ತು ಕೂಡಾ ಇರಲ್ಲ. ಹೀಗೆ ಸಾಕಷ್ಟು ತಪ್ಪು ಕಲ್ಪನೆಗಳು ಜನ್ರಲ್ಲಿ ಇವೆ. ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚೋ ಪರಿಸ್ಥಿತಿಯಲ್ಲಿದೆ. ಸಾಮಾನ್ಯವಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಕ್ಕಳಷ್ಟೇ ಅಲ್ಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರೂ ಶಾಲೆಯತ್ತ ಬರುವುದು ವಿರಳ. ಆದರೆ ಸುರಿಬೈಲಿನಲ್ಲಿ ಹಾಗಲ್ಲ. ಲಾಕ್ಡೌನ್ ಸದುಪಯೋಗ ಪಡಿಸಿಕೊಂಡ  ಈ ಶಾಲೆಯಲ್ಲಿ ಶಾಲಾ ಸಿಬ್ಬಂದಿ ತರಕಾರಿ ತೋಟ ಮಾಡಿ ಗಮನ ಸೆಳೆದಿದ್ದಾರೆ. ಶಾಲೆಯ ಪಠ್ಯ ಚಟುವಟಿಕೆಗಳ ಕುರಿತು ಇರುವಷ್ಟೇ ಹೊರಾಂಗಣ ಚಟುವಟಿಕೆಯಲ್ಲೂ ಕಾಳಜಿಯನ್ನು ಶಾಲಾಭಿವೃದ್ಧಿ ಸಮಿತಿ ವಹಿಸಿಕೊಂಡ ಕಾರಣ ಇಡೀ ಶಾಲೆಯಲ್ಲಿ ಹಸಿರು ನಳನಳಿಸುತ್ತಿದೆ. ಸಮೃದ್ಧ ತರಕಾರಿ ತೋಟದಿಂದ ಶಾಲೆ ಕಂಗೊಳಿಸುತ್ತಿದೆ.

 25ಕ್ಕೂ ಅಧಿಕ ತರಕಾರಿಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ಇದಲ್ಲದೆ ಇಲ್ಲಿರುವ ಅಡಕೆ ತೋಟವೂ ಸಮೃದ್ಧ ಬೆಳೆ ಒದಗಿಸಿದ್ದು, ರಾಜ್ಯಕ್ಕೇ ಮಾದರಿ ಎನಿಸಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ. ಅಬೂಬಕ್ಕರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಗೋಪಾಲ ಎಸ್ ನೇತೃತ್ವದಲ್ಲಿ ಸಮಿತಿ ಸದಸ್ಯರು, ಅಧ್ಯಾಪಕರು, ಸ್ಥಳೀಯರ ಸಹಕಾರ ಇಲ್ಲಿದೆ.ಜೂನ್ ತಿಂಗಳಿನಲ್ಲಿ ವಿವಿಧ ಬಗೆಯ ತರಕಾರಿ ಬೀಜಗಳನ್ನು ಬಿತ್ತಿದ್ದರು. ಅದೀಗ ಫಲ ನೀಡಿದೆ. ಶಾಲೆಗೆ ಸಂಬಂಧಪಟ್ಟ 25 ಸೆಂಟ್ಸ್ ಜಾಗದಲ್ಲಿ ಅಲಸಂಡೆ, ಕೆಂಪು ಬೆಂಡೆ, ಬಿಳಿಬೆಂಡೆ, ಸೋರೆಕಾಯಿ, ಪಡುವಲಕಾಯಿ, ಕುಂಬಳಕಾಯಿ, ಚೀನಿಕಾಯಿ, ಹರಿವೆ, ಮರಗೆಣಸು, ಸಿಹಿಗೆಣಸು, ಸೌತೆಕಾಯಿ, ಮುಳ್ಳುಸೌತೆ, ಹಾಗಲಕಾಯಿ, ಶುಂಠಿ, ಅರಸಿನ, ಬಾಳೆ, ಅನನಾಸ್, ಟೊಮೊಟೊ ಮೊದಲಾದ ತರಕಾರಿಗಳು ತೋಟದಲ್ಲಿ ಲಭ್ಯ.

ಕಳೆದ ಮೂರು ವಾರದಿಂದ ತರಕಾರಿಗಳನ್ನು ಕೊಯ್ಯಲಾಗುತ್ತಿದೆ. ತರಕಾರಿ ಬೆಳೆಸಲೆಂದೇ ಪ್ರತ್ಯೇಕ ಜಾಗವನ್ನು ಕಾಯ್ದಿರಿಸಲಾಗಿದೆ. ಇದಲ್ಲದೆ, ಶಾಲೆಯ 1.5 ಎಕ್ರೆ ಜಾಗದಲ್ಲಿ ಅಡಕೆ ತೋಟ ನಿರ್ಮಿಸಲಾಗಿದೆ. ಇದರಿಂದ ಶಾಲೆಗೆ 1.80 ಲಕ್ಷ ರೂ ಆದಾಯ ಬರುತ್ತಿದೆ. ಅದಲ್ಲದೇ ಸುತ್ತಮುತ್ತಲಿನಲ್ಲಿ ಹಲಸು, ಬದನೆ ಮೊದಲಾದ ಕೃಷಿಗಳನ್ನು ನಡೆಸುತ್ತಿದೆ. ತರಕಾರಿ, ಅನನಾಸ್, ಅಡಿಕೆ ತೋಟ, ಬಾಳೆಗಿಡ ಹೀಗೆ ಪ್ರತ್ಯೇಕ ಪ್ರತ್ಯೇಕವಾಗಿ ಜಾಗದಲ್ಲಿ ಬೆಳಸಲಾಗುತ್ತಿದೆ.ಅಂತರ್ಜಲ  ವೃದ್ದಿಸೋ  ನಿಟ್ಟಿನಲ್ಲಿ ನೀರಿಂಗಿಸೋ ಯೋಜನೆಯನ್ನೂ ಅಳವಡಿಕೊಳ್ಳಲಾಗಿದೆ.  ಕಟ್ಟಡದಿಂದ ಬೀಳುವ ಮಳೆನೀರನ್ನು ಸಂಗ್ರಹಿಸಿ, ಶುದ್ದೀಕರಣ ಮಾಡಿ ಶಾಲೆಯ ತೋಟದ ಉಪಯೋಗಕ್ಕೆ ಹಾಗೂ 40 ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.

ಕುಗ್ರಾಮವೊಂದರ ಈ ಶಾಲೆಯಲ್ಲಿ ಸದ್ಯ 500ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಆಟ ಪಾಠದ ಜೊತೆ ಸ್ವಚ್ಚತೆಯ ಪಾಠವನ್ನೂ ಹೇಳಿಕೊಡಲಾಗುತ್ತೆ. ಜೊತೆಗೆ ಪರಿಸರದ ಮೇಲೆ ಪ್ರೀತಿಯನ್ನು ಮೂಡಿಸೋ ಪಾಠವನ್ನೂ ಇಲ್ಲಿ ಹೇಳಿಕೊಡಲಾಗುತ್ತೆ.

- Advertisement -

Related news

error: Content is protected !!