
ನವದೆಹಲಿ: ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಏರ್ಇಂಡಿಯಾ ಖಾಸಗಿ ಮಾರಾಟ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಟಾಟ ಗ್ರೂಪ್ ಏರ್ ಇಂಡಿಯಾ ಸಂಸ್ಥೆಯನ್ನು ₹18,718 ಕೋಟಿಗೆ ಹರಾಜಿನಲ್ಲಿ ಖರೀದಿಸಿದೆ. ಈ ಮೂಲಕ ತನ್ನಿಂದ ಕೈಬಿಟ್ಟುಹೋಗಿದ್ದ ಏರ್ ಇಂಡಿಯಾ 67 ವರ್ಷಗಳ ಬಳಿಕ ಇದೀಗ ಮರಳಿ ಟಾಟಾ ಗ್ರೂಪ್ ಪಾಲಾದಂತಾಗಿದೆ. ಕಳೆದ ತಿಂಗಳು ಟಾಟಾ ಸನ್ಸ್ ಹಾಗೂ ಸ್ಪೈಸ್ಜೆಟ್ನ ಮುಖ್ಯಸ್ಥ ಅಜಯ್ ಸಿಂಗ್ ಹರಾಜು ಕೂಗಿದ್ದರು, ಕೊನೆಗೆ ಇದೀಗ ಟಾಟಾ ಸನ್ಸ್ ಗ್ರೂಪ್ ಹರಾಜಿನಲ್ಲಿ ಗೆದ್ದಿದೆ.
ಇನ್ನು ಈ ಹರಾಜಿನಲ್ಲಿ ಏರ್ ಇಂಡಿಯಾದ ಭೂಮಿ ಮತ್ತು ಕಟ್ಟಡಗಳು ಒಳಗೊಂಡಿರುವುದಿಲ್ಲ. ಇವುಗಳನ್ನು ಸರ್ಕಾರಕ್ಕೆ ವರ್ಗಾಯಿಸಲಾಗುವುದು ಎಂಬ ಮಾಹಿತಿ ಇದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಹೊರಡಿಸಿದೆ. ಕೇಂದ್ರ ಸರ್ಕಾರ ನಷ್ಟದಲ್ಲಿ ನಡೆಯುತ್ತಿದ್ದ ಏರ್ ಇಂಡಿಯಾಗೆ 2009 ರಿಂದ 1,10,276 ಕೋಟಿ ರೂಗಳಷ್ಟು ನೆರವನ್ನು ನೀಡಿತ್ತು. 2021 ರ ಡಿಸೆಂಬರ್ಗೆ ಸರ್ಕಾರ ಮತ್ತು ಏರ್ ಇಂಡಿಯಾ ನಡುವಿನ ವ್ಯವಹಾರ ಕೊನೆಗೊಳ್ಳಲಿದೆ.
ಆಗಸ್ಟ್ 31, 2021 ರ ಹೊತ್ತಿಗೆ, ಏರ್ ಇಂಡಿಯಾ ಒಟ್ಟು ₹ 61,562 ಕೋಟಿ ಸಾಲವನ್ನು ಹೊಂದಿದೆ, ಅದರಲ್ಲಿ ₹ 15,300 ಅನ್ನು ಬಿಡ್ ಮಾಡಿದವರು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಪಾಂಡೆ ಹೇಳಿದ್ದಾರೆ. ಹೀಗಾಗಿ 46,262 ಕೋಟಿ ಏರ್ ಇಂಡಿಯಾ ಅಸ್ಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್(AIAHL)ಗೆ ವರ್ಗಾವಣೆಯಾಗಲಿದೆ ಎನ್ನಲಾಗಿದೆ. ಒಂದು ವರದಿಯ ಪ್ರಕಾರ ಏರ್ ಇಂಡಿಯಾ 70,000 ಕೋಟಿಗಳನ್ನು ಕಳೆದುಕೊಂಡಿದೆ. ಈ ಮೂಲಕ ಸರ್ಕಾರ ಪ್ರತಿದಿನ 20 ಕೋಟಿಗಳನ್ನು ಕಳೆದುಕೊಳ್ಳುತ್ತಿತ್ತು ಎನ್ನಲಾಗಿದೆ.










