ಮುಂಬೈ: 20ರ ಹರೆಯದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಇರಿದು ಕೊಂದು, ಆಕೆಯ ಶವವನ್ನು ರೈಲ್ವೆ ನಿಲ್ದಾಣದ ಬಳಿಯ ಪೊದೆಯಲ್ಲಿ ಎಸೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಘಟನೆಯ ಕುರಿತು ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಪ್ರತಿಕ್ರಿಯಿಸಿ, ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ ಎಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಆಕೆಯ ಮೃತದೇಹ ಅನೇಕ ಗಾಯದ ಗುರುತುಗಳು ಮತ್ತು ಇರಿತದ ಗಾಯಗಳನ್ನು ಒಳಗೊಂಡಿದೆ. ಇದು ಆಕೆಯನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಕೊಲೆಯಾದ ಯುವತಿಯನ್ನು ಯಶಶ್ರೀ ಶಿಂಧೆ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿತ್ತು. ಈಕೆ ಊರನ್ ನಿವಾಸಿಯಾಗಿದ್ದು, ಸುಮಾರು 25 ಕಿ.ಮೀ ದೂರದ ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೀತಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯ ಬಳಿಕ ಪ್ರಿಯಕರ ಕೂಡ ನಾಪತ್ತೆಯಾಗಿದ್ದಾನೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೇ ಆರೋಪಿ ಪ್ರಿಯಕರನ ಪತ್ತೆಗೆ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.