






ಬಿಡಿಯಾಗಿ ನೋಡಿದರೆ ಮುತ್ತಿನಂತೆಯೂ, ಇಡಿಯಾಗಿ ನೋಡಿದರೆ ಮುತ್ತಿನ ಹಾರದಂತೆಯೂ ಶೋಭಿಸುವ ವಚನ ಪರಂಪರೆಯಲ್ಲಿ ವಚನಗಳ ಮೂಲಕ ಆತ್ಮಕಲ್ಯಾಣದ ಜೊತೆಗೆ ಸಮಾಜಕಲ್ಯಾಣದ ಬಗೆಗೂ ಜೀವಪರ ಹೆಜ್ಜೆಯಿಟ್ಟವರಲ್ಲಿ ಬಸವಣ್ಣ ಎಲ್ಲರ ಮನದಲ್ಲಿ ಇಂದಿಗೂ ನೆಲೆಯಾಗಿದ್ದಾರೆ. ಬುದ್ಧಿ-ಅನುಭವದಿಂದ ಒಡಗೂಡಿರುವ ಅವರ ರಚನೆಗಳು ಆತ್ಮದ ಅರಿವಿನ ಸಂಕೇತವಾಗಿ ಬೆಳಗಿರುವುದನ್ನು ಕಾಣಬಹುದು. ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡಿದ ಮತ್ತು ‘ಕಾಯಕವೇ ಕೈಲಾಸ’ ಎಂಬ ಮಹೋನ್ನತ ಆದರ್ಶವನ್ನು ೧೨ನೇ ಶತಮಾನದಲ್ಲೇ ಇಡೀ ಜಗತ್ತಿಗೆ ನೀಡಿದ ವಿಶ್ವಗುರು ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಹರಿಕಾರರು.
ಆಸೆ, ಆಮಿಷಗಳ ಮೋಹ ಬಯಕೆಗಳನ್ನು ದಾಟಿ, ಕಾಯ, ಮನಸ್ಸು ಮತ್ತು ಇಂದ್ರಿಯ ವಿಕಾರಗಳನ್ನು ಕಳೆದು ಇರುವ ಒಂದು ಬಾಳಿನಲ್ಲಿ ಭವಮುಕ್ತನಾಗಬೇಕು ಎಂಬ ಹಂಬಲವನ್ನು ಅವರು ಅನೇಕ ವಚನಗಳಲ್ಲಿ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಅವರ ಕಣ್ಣಿನಲ್ಲಿ ಜ್ಞಾನ ಎಂದರೆ ಕೇವಲ ತಿಳಿವಳಿಕೆಯಲ್ಲ. ಅದರ ಸಾರ್ಥಕತೆಯಿರುವುದು ಕ್ರಿಯೆಯಲ್ಲಿ. ಇದೊಂದು ಬುದ್ಧಿ, ತರ್ಕವನ್ನು ಮೀರಿದ ಭಾವ. ಸಪ್ತವ್ಯಸನಗಳ ದಾಟಬೇಕಾದುದನ್ನು ಹೇಳುತ್ತಾ, ತನು-ಮನ-ಭವದ ಬಯಕೆಯನ್ನು ದಾಟುವುದು ಬದುಕಿನ ಸಾರ್ಥಕತೆ ಎಂದು ಸಾರುತ್ತಾರೆ.
ಎತ್ತೆತ್ತಲೋ ಹರಿದು ಚೂರಾದ ವಿಷಯ ಸಾಗರದಲ್ಲಿ ಮುಳುಗಿ ಕಂಗೆಟ್ಟ ಮನವನ್ನು ಪರಮಾತ್ಮನಲ್ಲಿ ಐಕ್ಯವಾಗಿಸುವ ಶಕ್ತಿಯೇ ಭಕ್ತಿ. ಜ್ಞಾನ ಬುದ್ಧಿಯ ಕಾರ್ಯವಾದರೆ, ಭಕ್ತಿ ಭಾವದ ಬೆಳಕು. ಇದು ‘ಗರಗಸದಂತೆ ಹೋಗುತ್ತ ಕೊಯ್ವುದು ಬರುತ್ತ ಕೊಯ್ವುದು’. ಇದಕ್ಕೆ ಅಡ್ಡಿಯಾಗುವುದು ಸಂಸಾರ ವ್ಯಾಮೋಹ ಮತ್ತು ವಿಷಯ ಸುಖದ ಹಾತೊರೆತ. ಶರಣಾಗತಿ ನೊಂದ ಎದೆಗೆ, ಬೆಂದ ಒಡಲಿಗೆ ಸಾಂತ್ವನವನ್ನು ನೀಡಬಲ್ಲುದು. ಅದಕ್ಕೆ ಕಿವಿ, ಕಣ್ಣು, ಕಾಯ, ಬಾಯಿ ಮತ್ತು ಮನದ ಸೂತಕ ಕಳೆಯಬೇಕು ಎನ್ನುತ್ತಾರೆ ಬಸವಣ್ಣನವರು.
ಅಂತರಂಗ ವಿಕಾಸದ ಮೂಲಕ ವ್ಯಕ್ತಿತ್ವವನ್ನು ವಿಕಸಿಸುವ ಮೌಲ್ಯಗಳ ಬಗೆಗೂ ಬಸವಣ್ಣ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಉದಾಹರಣೆಗೆ- ‘ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರು ಹಳಿಯಲುಬೇಡ’ ಎನ್ನುವ ಮೂಲಕ ಅಂತರಂಗ ಶುದ್ಧಿ ಹೊಂದಬೇಕಾದುದನ್ನು ಸೂಚಿಸಲಾಗಿದೆ. ಬಸವಣ್ಣನವರ ಕ್ರಾಂತಿಗೆ ಮೂಲ ಆಧಾರವಾದ ಈ ವಚನವು ಇಡೀ ವಿಶ್ವ ಸಮುದಾಯಕ್ಕೆ ನೀಡಿದ ಸಾಮಾಜಿಕ ನೀತಿಸಂಹಿತೆ.
ಮನದ ಚಾಂಚಲ್ಯ, ಮನವನ್ನು ನಿಗ್ರಹಿಸುವ ಪರಿಯನ್ನು ಹೇಳುವ ಬಸವಣ್ಣ ಮನೋನಿಗ್ರಹ ಮತ್ತು ಸದೃಢ, ಸಮಷ್ಟಿ ಭಾವದ ಬಗ್ಗೆ ತಮ್ಮ ವಚನಗಳಲ್ಲಿ ವಿವರಿಸುತ್ತಾರೆ. ಅಂತರಂಗ ಬಹಿರಂಗ ಶುದ್ಧಿಯಾದಾಗಲೇ ಬದುಕಿನ ಸಾರ್ಥಕ್ಯ ಎಂದು ಸಾರುವುದೇ ಬಸವಣ್ಣನವರ ವಚನಗಳ ಸಾರವಾಗಿದೆ.
‘ದಯವೇ ಧರ್ಮದ ಮೂಲ/ ದಯವಿಲ್ಲದ ಧರ್ಮವದಾವುದಯ್ಯಾ/ ದಯೆಯೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿ/ ದಯೆಯೇ ಧರ್ಮದ ಮೂಲವಯ್ಯಾ/ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ’ ಎಂದು ಸಾರಿ ಇಡೀ ಜಗತ್ತಿಗೆ ಮಾನವ ಪ್ರೇಮವನ್ನು ಸಾರಿದವರಿವರು. ಬಸವಣ್ಣನವರು ಜಾತ್ಯತೀತವಾದ ಸುಂದರ ಸಮಾನತೆಯ ವಿಶ್ವಭ್ರಾತೃತ್ವದ ಸಮಾಜದ ಕನಸನ್ನು ಕಂಡು, ಜಾತಿ-ಜಾತಿಗಳ ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷದ ವಿರುದ್ಧ ಸಿಡಿದೆದ್ದು, ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ/ ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ/ ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ’ ಎನ್ನುವ ಮೂಲಕ ಎಲ್ಲರೂ ನಮ್ಮವರೇ ಎಂಬ ಸಂದೇಶವನ್ನು ಸಾರಿದರು.
‘ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ/ ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ/ ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ/ ಇದಾವ ಪರಿಯಲ್ಲಿ ಕಾಡಿಸಿತು ಮಾಯೆ/ ಈ ಮಾಯೆಯ ಕಳೆವಡೆ ಎನ್ನಳವಲ್ಲ/ ನೀವೆ ಬಲ್ಲಿರಿ ಕೂಡಲಸಂಗಮದೇವಾ’ ಎನ್ನುವ ಮೂಲಕ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ ಹೀಗೆ ಹಲವು ಪಾತ್ರಗಳಲ್ಲಿ ಪುರುಷನ ಬದುಕನ್ನು ಸಾರ್ಥಕಗೊಳಿಸುವ, ಸಮಗ್ರಗೊಳಿಸುವ ಸ್ತ್ರೀ ಸಮಾಜಕ್ಕೆ ಸ್ತ್ರೀ ಸಮಾನತೆಯ ಸಂದೇಶವನ್ನು ಸಾರಿದರು.
ಧರ್ಮಕ್ಕೆ ವೈಚಾರಿಕತೆಯ ವಿವೇಕದ ಸ್ಪರ್ಶ ನೀಡಿ ಅಂಧಶ್ರದ್ಧೆ, ಅಂಧಾನುಕರುಣೆ, ಮೂಢನಂಬಿಕೆಗಳ ವಿರುದ್ಧ ವಿನೂತನ ಸಾಮಾಜಿಕ ಹೋರಾಟ ನಡೆಸಿದ ಬಸವಣ್ಣನವರು ‘ಲಗ್ನವೆಲ್ಲಿಯದೋ, ವಿಘ್ನವೆಲ್ಲಿಯದೋ ಸಂಗಯ್ಯ/ ದೋಷವೆಲ್ಲಿದೆಯೋ, ದುರಿತವೆಲ್ಲಿದೆಯೋ ಸಂಗಯ್ಯ/ ನಿಮ್ಮ ಮಾಣದೆ ನೆನೆವಂಗೆ ಭವಕರ್ಮವೆಲ್ಲಿಯದೋ/ ಬಂಧನವೆಲ್ಲಿಯದೋ ಕೂಡಲಸಂಗಮದೇವಾ’ ಎಂದು ಪ್ರಕೃತಿಯ ಸೃಷ್ಟಿಯಲ್ಲಿ ಎಲ್ಲವೂ ಶುಭವೇ. ಆತ್ಮಕಲ್ಯಾಣ, ಲೋಕಕಲ್ಯಾಣವೇ ಶರಣರ ಮೂಲ ಗುರಿ. ಆತ್ಮಶುದ್ಧಿ ಲೋಕಕಲ್ಯಾಣವೇ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಇರುವ ದಾರಿ ಎಂದು ಸಾರಿದರು.
ಸಮಾಜದ ಸರ್ವಾಂಗೀಣ ಪ್ರಗತಿಗೆ, ವಿಕಾಸಕ್ಕೆ ದುಡಿಮೆಯ, ಬೆವರಿನ ಸಂಸ್ಕೃತಿ ಅತ್ಯಗತ್ಯ ಎಂದು ಹೇಳುವ ಮೂಲಕ ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದರು. ಧರ್ಮ, ದೇವರ ಹೆಸರಿನಲ್ಲಿ ಆಗುತ್ತಿದ್ದ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಿದ ಬಸವಣ್ಣನವರು ತಮ್ಮ ‘ದೇಹವೇ ದೇವಾಲಯ’ ಎಂಬ ತತ್ವವನ್ನು ‘ಉಳ್ಳವರು ಶಿವಾಲಯವ ಮಾಡುವರು/ ನಾನೇನ ಮಾಡುವೆ ಬಡವನಯ್ಯಾ/ ಎನ್ನ ಕಾಲೇ ಕಂಬ ದೇಹವೇ ದೇಗುಲ/ ಶಿರವೇ ಹೊನ್ನ ಕಲಶವಯ್ಯಾ/ ಕೂಡಲಸಂಗಮದೇವ ಕೇಳಯ್ಯಾ/ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಸಾರಿದರು.
‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ/ ಧರೆ ಹತ್ತಿ ಉರಿದಡೆ ನಿಲಲುಬಾರದು/ ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ/ ನಾರಿ ತನ್ನ ಮನೆಯಲ್ಲಿ ಕಳುವಡೆ/ ತಾಯ ಮೊಲೆಹಾಲು ನಂಜಾಗಿ ಕೊಲುವಡೆ/ ಇನ್ಯಾರಿಗೆ ದೂರುವೆ ಕೂಡಲಸಂಗಮದೇವ’ ಎಂದು ಅವರವರ ಕಾರ್ಯವನ್ನು ನೆನಪಿಸಿದ ಬಸವಣ್ಣ, ‘ನುಡಿದರೆ ಮುತ್ತಿನ ಹಾರದಂತಿರಬೇಕು/ ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು/ ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು/ ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು/ ನುಡಿಯೊಳಗಾಗಿ ನಡೆಯದಿದ್ದಡೆ/ ಕೂಡಲಸಂಗಮದೇವನೆಂತೊಲಿವನಯ್ಯಾ’ ಎಂದು ನಡೆ-ನುಡಿಗಳ ಸಮನ್ವಯವನ್ನು ಸಾರಿದ್ದಾರೆ. ‘ಮೃದುವಚನಗಳೇ ಸಕಲ ಜಪಂಗಳಯ್ಯ ಮೃದು ವಚನಗಳೇ ಸಕಲ ತಪಂಗಳಯ್ಯಾ, ಸದುವಿನಯವೇ ಸದಾಶಿವನ ಒಲುಮೆಯಯ್ಯಾ’ ಎಂದು ಪ್ರತಿಪಾದಿಸುತ್ತಾ ವಿನಯದೊಡಗೂಡದ ನುಡಿಯೇ ಶಿವನ ಒಲುಮೆಗೆ ಸಾಧನ ಎಂಬ ಮಾತಿನ ಮಹತ್ವವನ್ನು ಸಾರಿದ್ದಾರೆ.
ಎಲ್ಲರೂ ನನ್ನವರೆನ್ನುವ ವಿಶ್ವ ಭ್ರಾತೃತ್ವಭಾವ, ‘ಎನಗಿಂತ ಕಿರಿಯರಿಲ್ಲ’ ಎಂಬ ವಿನಮ್ರ ಭಾವದಿಂದ ಜಗತ್ತನ್ನು ಬೆಳಗಿದ ಬಸವಣ್ಣನವರು ಧಾರ್ಮಿಕ ತಳಹದಿಯ ಮೇಲೆ ಸಾಮಾಜಿಕ, ಆರ್ಥಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ರಾಂತಿಗೈದ ಸಮಗ್ರ ಕ್ರಾಂತಿಯ ಹರಿಕಾರರು. ಅವರ ಕಾಲದಲ್ಲಿ ಧರ್ಮವೇ ಎಲ್ಲದರ ಕೇಂದ್ರ ಬಿಂದುವಾಗಿತ್ತು. ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ, ಸಮಾಜದ ಉನ್ನತಿಗೆ ಧರ್ಮವೇ ಅಡಿಗಲ್ಲೆಂಬುದು ಬಸವೇಶ್ವರರು ಕಂಡುಕೊಂಡ ಸತ್ಯ. ಧಾರ್ಮಿಕ ವಲಯದಲ್ಲಿ ಹಾಸುಹೊಕ್ಕಾಗಿದ್ದ ಶೋಷಣೆ ತೊಡೆದು ಹಾಕಿದಲ್ಲಿ ಇತರೆ ವಲಯಗಳಲ್ಲಿನ ಸುಧಾರಣೆ ತಾನೇ ತಾನಾಗಿ ಆಗುವುದೆಂದು ಅರಿತು, ಶೋಷಣೆ, ಅಸಮಾನತೆ ತುಂಬಿಕೊಂಡಿದ್ದ ಧರ್ಮದಿಂದ ಸಮಾಜದ ಉನ್ನತಿ ಸಾಧ್ಯವಿಲ್ಲವೆಂದು, ಸಾಮಾಜಿಕ ನೆಲೆಯಲ್ಲಿನ ಆರ್ಥಿಕ ಅಸಮಾನತೆಗೆ ಪರಿಹಾರ ಚಿಂತಿಸಿ, ಭಕ್ತ-ಭವಿ ಪರಿಕಲ್ಪನೆಯನ್ನೂ ಯೋಚಿಸಿದರು. ಚಾತುರ್ವರ್ಣ ವ್ಯವಸ್ಥೆಯನ್ನು ಮೀರಿ ಹೊಸ ಸಮಾಜವನ್ನು ಕಟ್ಟುವ ಮಾನವ ಧರ್ಮದ ಪರಿಕಲ್ಪನೆಯಿಂದ ಸ್ಥಾವರ ಆರಾಧನೆಗೆ ವಿರುದ್ಧವಾಗಿ ಇಷ್ಟಲಿಂಗದ ಪರಿಕಲ್ಪನೆ, ವರ್ಗವ್ಯವಸ್ಥೆಗೆ ಪ್ರತಿಯಾಗಿ ಕಾಯಕ ಸಿದ್ಧಾಂತ, ದಾಸೋಹ ಸಿದ್ಧಾಂತಗಳೊಡನೆ ಆಧ್ಯಾತ್ಮದ ಉನ್ನತೀಕರಣ ಅಥವಾ ಅಂತರಂಗದ ವಿಕಾಸಕ್ಕೂ ಚಿಂತಿಸಿ, ವ್ಯಕ್ತಿಗಳು ಭೌತಿಕ ಪ್ರಪಂಚದಲ್ಲಿಯೇ ಮುಳುಗಿ ಹೋದರೆ ಅದರಿಂದ ಪ್ರಯೋಜನವಿಲ್ಲ. ಭೌತಿಕ ಭೋಗಭಾಗ್ಯಗಳನ್ನು ಅನುಭವಿಸುತ್ತಲೇ ಅವುಗಳ ಭ್ರಮಾತ್ಮಕ ಲೋಕದಿಂದ ಬಿಡುಗಡೆಗೊಳ್ಳುವ ಯಾತ್ರೆಯ ಪರ್ಯಾಲೋಚನೆ ಇರಬೇಕೆಂದು ಹೇಳಿದ್ದಾರೆ.
ಸ್ವರ್ಗ ನರಕಗಳು ಬೇರೆ ಎಲ್ಲಿಯೂ ಇರದೆ ನಮ್ಮ ನಡೆವಳಿಕೆಗಳಲ್ಲಿಯೇ ಇರುವವೆಂದು ‘ದೇವಲೋಕ, ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೊ/ ಸತ್ಯವ ನುಡಿವುದೇ ದೇವಲೋಕ/ ಮಿಥ್ಯವ ನುಡಿವುದೇ ಮರ್ತ್ಯಲೋಕ/ ಆಚಾರವೇ ಸ್ವರ್ಗ, ಅನಾಚಾರವೇ ನರಕ/ ಕೂಡಲಸಂಗಮದೇವಾ ನೀನೇ ಪ್ರಮಾಣು’ ಎಂದರು. ಆಧ್ಯಾತ್ಮ ಮತ್ತು ಲೌಕಿಕಗಳು ಒಂದಕ್ಕೊಂದು ಪೂರಕವಾಗಿವೆ. ಅವು ಒಂದೇ ನಾಣ್ಯದ ಎರಡು ಮುಖಗಳು. ಒಂದರಲ್ಲಿ ಪ್ರಗತಿಯನ್ನು ಸಾಧಿಸಿ ಇನ್ನೊಂದನ್ನು ಕಡೆಗಣಿಸಿದರೆ ಜೀವನ ಅಪೂರ್ಣವಾಗುತ್ತದೆ. ಅಲ್ಲಿಯೂ ಸಲ್ಲಬೇಕು ಮತ್ತು ಇಲ್ಲಿಯೂ ಸಲ್ಲಿಸಬೇಕು. ಹಾಗಾದರೆ ಮಾತ್ರ ಜೀವನ ಪರಿಪೂರ್ಣ ಎಂದು ಸಾರಿದರು.
ಹೀಗೆ ಹನ್ನೆರಡನೆಯ ಶತಮಾನದಲ್ಲಿ ಕ್ರಾಂತಿಪುರುಷರಾಗಿ ಕಂಗೊಳಿಸಿ, ಸಮಾಜದ ಅಂಕುಡೊಂಕನ್ನು ಸರಿಪಡಿಸಲು ತತ್ವಜ್ಞಾನಿಯಾಗಿ ಬೆಳಗಿದ ಮಹಾನ್ ಚೇತನ ಬಸವಣ್ಣ ವಿಶ್ವಮಾನ್ಯರಾದವರು. ಕಲ್ಯಾಣದ ಮಾತುಕತೆಯೇ ಅನುಭವ ಮಂಟಪವಾಗಿ, ಮಾತು ವಚನವಾಗುವ ಮೂಲಕ ಕಲ್ಯಾಣದಲ್ಲಿ ಜ್ಞಾನದೀವಿಗೆ ಬೆಳಗಿ ವಚನಪುಷ್ಪದ ಗಂಧವ ಎಲ್ಲೆಡೆ ಹರಡಿದರು ಎಂಬುದಷ್ಟೇ ಸಾರ್ವಕಾಲಿಕ ಸತ್ಯ.
ಡಾ. ಮೈತ್ರಿ ಭಟ್, ವಿಟ್ಲ








