





ಹಾಸನ: ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಖತರ್ನಾಕ್ ಕಳ್ಳಿಯರನ್ನು ಬಂಧಿಸಿ 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ಕುಪ್ಪಂ ಗ್ರಾಮದ ಶಶಿ (35), ಮಾಧವಿ (40), ಅಕಿಲ (30) ಹಾಗೂ ವಿದ್ಯಾ (29) ಎಂದು ಗುರುತಿಸಲಾಗಿದೆ.
ನಾಲ್ವರು ಒಂದೇ ಗ್ರಾಮದವರಾಗಿದ್ದು ಕಳ್ಳತನವನ್ನೇ ಫ್ಯಾಷನ್ ಮಾಡಿಕೊಂಡಿದ್ದರು. ಬಂಧಿತ ಶಶಿ ಹಾಗೂ ವಿದ್ಯಾ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮಾಧವಿ ಹಾಗೂ ಅಕಿಲ ಮೊದಲ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಶಶಿ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು ಉಳಿದ ಮೂವರು ಕ್ರಷರ್‌ಗಳಲ್ಲಿ ಕಲ್ಲು ಒಡೆಯುವ ಕೆಲಸ ಮಾಡಿಕೊಂಡಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಮಹಿಳೆಯರೇ ಇವರೇ ಟಾರ್ಗೆಟ್ ಆಗಿದ್ದು ನೂಕುನುಗ್ಗಲಿನಲ್ಲಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ ಹತ್ತುವಾಗ ಅವರ ಮೈ ಮೇಲಿನ ಚಿನ್ನದ ಒಡವೆ, ವ್ಯಾನಿಟಿ ಬ್ಯಾಗ್‌ಗಳಿದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದರು. ತಾವು ಸಹ ಬಸ್ ಹತ್ತುವರಂತೆ ನಟನೆ ಮಾಡುತ್ತಿದ್ದು ಯಾರಿಗೂ ಸಂಶಯ ಬರುತ್ತಿರಲಿಲ್ಲ.
ಸದ್ಯ ಬಂಧಿತರಿಂದ 35 ಗ್ರಾಂ ತೂಕದ ಚಿನ್ನದ ಸರ, 22 ಗ್ರಾಂ ತೂಕದ ನೆಕ್ಲೆಸ್, 5 ಗ್ರಾಂ ತೂಕದ ಬೆಳ್ಳಿ ಗಣಪತಿ ಡಾಲರ್ ಹಾಗೂ 29 ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಹಮದ್ ಸುಜೇತಾ ಮಾಹಿತಿ ನೀಡಿದರು.








