


ಮಂಗಳೂರು: ಮೆಹಂದಿ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳಿದ್ದ ವೇಳೆ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬಜಪೆ ಪೊಲೀಸರು ಭೇದಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
2025ರ ಸೆಪ್ಟೆಂಬರ್ 23ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆ ನಿವಾಸಿ ಮೊಹಮ್ಮದ್ ಷರೀಫ್ ಅವರು ತಮ್ಮ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕಾಗಿ ಕಳವಾರಿಗೆ ತೆರಳಿದ್ದರು. ಈ ಸಂದರ್ಭ ರಾತ್ರಿ ವೇಳೆ ಅವರ ಮನೆಗೆ ನುಗ್ಗಿದ ಕಳ್ಳರು ಸುಮಾರು ₹23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1,25,000 ನಗದನ್ನು ಕಳವುಗೈದಿದ್ದರು.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 176/2025 ಪ್ರಕರಣವನ್ನು BNS 2023ರ ಕಲಂ 331(3), 331(4), 305 ಅಡಿ ದಾಖಲಿಸಲಾಗಿತ್ತು.

ವಿದೇಶಕ್ಕೆ ಓಡಿ ತಲೆಮರೆಸಿಕೊಂಡ ಆರೋಪಿಗೆ LOC
ಪ್ರಕರಣದ ತನಿಖೆ ಆರಂಭಿಸಿದ ಬಜಪೆ ಪೊಲೀಸರು ಶಂಕಿತನಾಗಿ ಗುರುತಿಸಿ ಕೊಂಡಿದ್ದ ಕಳವಾರು ಚರ್ಚ್ ಬಳಿ ನಿವಾಸಿ
ಅಬ್ದುಲ್ ನಾಸರ್ @ ನಾಸಿರ್ @ ನಾಚಿ (31) ಎಂಬಾತನು ಕಳ್ಳತನ ಮಾಡಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿರುವ ಮಾಹಿತಿ ಸಂಗ್ರಹಿಸಿದರು. ತಕ್ಷಣವೇ ಆತನ ವಿರುದ್ಧ Look Out Circular (LOC) ಹೊರಡಿಸಲಾಯಿತು.
LOC ಮೂಲಕ ಪತ್ತೆಯಾದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಜೊತೆಗೆ ದೂರುದಾರರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಈ ಕಳ್ಳತನದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.
ಆರೋಪಿಯಿಂದ 222 ಗ್ರಾಂ ತೂಕದ ಚಿನ್ನಾಭರಣ – ಅಂದಾಜು ಮೌಲ್ಯ ₹27 ಲಕ್ಷ, ₹20,000 ನಗದು, ಸುಮಾರು ₹50,000 ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.








