Sunday, July 19, 2026
spot_imgspot_img
spot_imgspot_img

ಇರಾನ್‌ ದಾಳಿಗೆ ಹೊತ್ತಿ ಉರಿದ ಅಮೆರಿಕದ ಟ್ಯಾಂಕರ್‌; ಓರ್ವ ಭಾರತೀಯ ಸಿಬ್ಬಂದಿ ಮೃತ್ಯು

- Advertisement -
- Advertisement -

ಬಾಗ್ದಾದ್‌: ಇರಾಕ್‌ನ ಬಸ್ರಾ ಬಳಿ ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್ ಸಫೇಸಿಯಾ ವಿಷ್ಣು ಮೇಲೆ ಇರಾನ್ ಸೂಸೈಡ್‌ ಬೋಟ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಅದರಲ್ಲಿದ್ದ ಉಳಿದ 15 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಮಾ.11 ರಂದು ದಾಳಿಗೊಳಗಾದ ಸಫೆಸಿಯಾ ವಿಷ್ಣು ಅಮೆರಿಕ ಮೂಲದ ಕಂಪನಿ ಸಫೆಸಿಯಾ ಟ್ರಾನ್ಸ್‌ಪೋರ್ಟ್ ಇಂಕ್ ಒಡೆತನದಲ್ಲಿದ್ದು, ಇರಾನ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದಾಳಿಯಲ್ಲಿ ರಕ್ಷಿಸಲ್ಪಟ್ಟ ಭಾರತೀಯ ನಾವಿಕರೊಂದಿಗೆ ಭಾರತದ ರಾಯಭಾರ ಕಚೇರಿ ಸಂಪರ್ಕದಲ್ಲಿದೆ.

ಇರಾಕ್‌ ಕರಾವಳಿ ಮೇಲೆ ನಡೆಸಿದ ದಾಳಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಕನಿಷ್ಠ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕರಾವಳಿಯಲ್ಲಿ ಒಂದು ಹಡಗಿನ ಮೇಲೆ ದಾಳಿ ನಡೆದಿದೆ. ಒಮಾನ್‌ನ ಉತ್ತರಕ್ಕೆ ಎರಡನೇ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೇ ದುಬೈನ ವಾಯುವ್ಯದಲ್ಲಿ ಮತ್ತೊಂದು ಹಡಗಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗುಗಳಾಗಿದ್ದರೂ ದಾಳಿ ನಡೆಸುವುದಾಗಿ ಇರಾನ್ ಹೇಳಿಕೊಂಡಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!