
ಸುರತ್ಕಲ್: ಎಂಆರ್‌ಪಿಎಲ್ ನಲ್ಲಿ ಎಚ್ 2ಎಸ್ ವಿಷಾನಿಲ ಸೇವಿಸಿ ಮೃತಪಟ್ಟಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿವಾಸಿ ದೀಪ್ ಚಂದ್ ಅವರ ಮೃತದೇಹವನ್ನು ನಿವಾಸಕ್ಕೆ ತಲುಪಿಸಲು ಹೋಗಿದ್ದ ಎಂಆರ್‌ಪಿಎಲ್‌ನ 6 ಮಂದಿ ಸಿಬ್ಬಂದಿಯನ್ನು ಗ್ರಾಮಸ್ಥರು ದಿಗಂಧನದಲ್ಲಿರಿಸಿದ ಘಟನೆ ಇಂದು ವರದಿಯಾಗಿದೆ.
ಎಂಆರ್‌ಪಿಎಲ್ ಉದ್ಯೋಗಿಗಳಾದ ಪ್ರಸಾದ್, ಬಿಲ್ದಾರ್, ಸುರೇಂದರ್, ಬಾಳನಾರಾಯಣ, ಪಂಕಜ್ ಮತ್ತು ಇನ್ನೋರ್ವನನ್ನು ಗ್ರಾಮಸ್ಥರು ದಿಗಂಧನದಲ್ಲಿರಿಸಿದ್ದಾರೆ ಎಂದು ತಿಳಿದು ಬಂದಿದೆ.
ದೀಪ್ ಚಂದ್ ಶನಿವಾರ ಎಂಆರ್‌ಪಿಎಲ್‌ನಲ್ಲಿ ನಡೆದಿದ್ದ ವಿಷಾನಿಲ ಸೋರಿಕೆಯಿಂದ ಮೃತಪಟ್ಟಿದ್ದರು. ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರವಿವಾರ ಬೆಳಗ್ಗೆ ಮೃತದೇಹವನ್ನು ಉತ್ತರ ಪ್ರದೇಶಕ್ಕೆ ರವಾನಿಸಲಾಗಿತ್ತು.
ಮಂಗಳೂರಿನಿಂದ ಬೆಂಗಳೂರಿಗೆ ಮಾರ್ಗ ಮೂಲಕ ಸಂಚರಿಸಿ ಬಳಿಕ ವಿಮಾನದ ಮೂಲಕ ದೀಪ್ ಚಂದ್ ಅವರ ನಿವಾಸಕ್ಕೆ ತರಲಾಗಿತ್ತು. ಆದರೆ, ಮನೆಯವರು ಮತ್ತು ಗ್ರಾಮಸ್ಥರು, ಮನೆಯ ಸದಸ್ಯರೊಬ್ಬರಿಗೆ ಎಂಆರ್ ಪಿಎಲ್ ನಲ್ಲಿ ಉದ್ಯೋಗ ನೀಡಬೇಕು ಮತ್ತು ಅತೀ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೃತದೇಹವನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಮೃತದೇಹದೊಂದಿಗೆ ತೆರಳಿದ್ದ ಪ್ರಸಾದ್, ಬಿಲ್ದಾರ್, ಸುರೇಂದರ್, ಬಾಳನಾರಾಯಣ, ಪಂಕಜ್ ಮತ್ತು ಇನ್ನೋರ್ವನನ್ನು ದಿಗಂಧನದಲ್ಲಿರಿಸಿದ್ದರು. ಅಲ್ಲದೆ, ಅವರ ಮೊಬೈಲ್‌ಗಳನ್ನೂ ವಶಕ್ಕೆ ಪಡೆದು ಕೊಂಡಿದ್ದರು ಎಂದು ತಿಳಿದು ಬಂದಿದೆ.








