ವಾಹನ ಸವಾರರ ಪ್ರಾಣದಲ್ಲಿ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳ ಚೆಲ್ಲಾಟ




ವಿಟ್ಲ : ರಾಜ್ಯ ಹೆದ್ದಾರಿಯ ಮಂಚಿ, ಕುಕ್ಕಾಜೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ರಸ್ತೆ ಸುರಕ್ಷತಾ ಕ್ರಮ ಅನುಸರಿಸದೇ ಬೇಕಾಬಿಟ್ಟಿ ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿ ನಡೆಸುವ ಮೂಲಕ ಅಪಘಾತಕ್ಕೆ ಕಾರಣವಾಗುತ್ತಿದೆ. ಸುರತ್ಕಲ್ -ಮಾರ್ನಬೈಲು-ಸಾಲೆತ್ತೂರು-ಕಬಕ ರಾಜ್ಯ ಹೆದ್ದಾರಿಯ ಕುಕ್ಕಾಜೆಯಿಂದ ಅಕ್ರಮ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ತೀರಾ ಇಕ್ಕಟ್ಟಾದ ತಿರುವು-ಮುರುವು ರಸ್ತೆಯಂಚಿನಲ್ಲೇ ಜೆಸಿಬಿ ಯಂತ್ರದ ಮೂಲಕ ಚರಂಡಿ ಅಗೆದು ಕಾಮಗಾರಿ ನಡೆಸುತ್ತಿದ್ದಾರೆ. ಹೆದ್ದಾರಿ ಇಲಾಖೆಯ ಯಾವುದೇ ಅನುಮತಿ ಪಡೆಯದೇ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಸುವ ಇಂಜಿನಿಯರ್ ಮತ್ತು ಗುತ್ತಿಗೆದಾರನ ವಿರುದ್ಧ ವಾಹನ ಸವಾರರು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ಮಾಹಿತಿಗೆ ಸ್ಪಂದಿಸಿದ ಪಿಡಬ್ಲ್ಯೂಡಿ ಇಂಜಿನಿಯರ್ ತಕ್ಷಣವೇ ಸ್ಥಳಕ್ಕಾಗಮಿಸಿ ಪೈಪ್ ಲೈನ್ ಕಾಮಗಾರಿ ನಡೆಸುವ ಗುತ್ತಿಗೆದಾರ ಮತ್ತು ಇಂಜಿನಿಯರ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ಮಾಹಿತಿ ನೀಡದೇ ಬೇಕಾಬಿಟ್ಟಿ ರಸ್ತೆ ಬದಿ ಅಗೆದು ಅಪಘಾತಕ್ಕೆ ಕಾರಣವಾದ ಅಕ್ರಮ ಕಾಮಗಾರಿಯನ್ನು ನಿಲ್ಲಿಸುವಂತೆ ಆದೇಶ ನೀಡಿದ್ದು ರಸ್ತೆ ಬದಿ ದುರಸ್ತಿ ಮಾಡಿಕೊಡುವಂತೆ ತಿಳಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಕೂಡಾ ಅಪಘಾತಕ್ಕೆ ಕಾರಣವಾಗುವ ಅಕ್ರಮ ಪೈಪ್ ಲೈನ್ ಕಾಮಗಾರಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದೆ.








